ನಂಜನಗೂಡು: ಇತ್ತೀಚೆಗೆ ಸರ್ಕಾರಿ ಶಾಲಾ ಕಾಲೇಜುಗಳ ವಸತಿ ನಿಲಯಗಳಿಗೆ ಸುಸಜ್ಜಿತ ಕಟ್ಟಡವಿಲ್ಲದೆ ಪರದಾಡುತ್ತಿರುವುದು ಒಂದೆಡೆಯಾದರೆ, ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿ ಕೋಟ್ಯಾಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಸರ್ಕಾರಿ ಸಾರ್ವಜನಿಕ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡವೊಂದು ಕಳೆದ 2 ದಶಕಗಳಿಂದ ಪಾಳು ಬಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಸುಮಾರು 22 ವರ್ಷಗಳ ಹಿಂದೆ ದೊಡ್ಡಕವಲಂದೆ ಗ್ರಾಮದ ನಂಜನಗೂಡು ಮತ್ತು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಹೋಬಳಿ ಮಟ್ಟದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಯರಿಗೆ ನಿರ್ಮಾಣವಾದ ಬಾಲಕಿಯರ ವಸತಿ ನಿಲಯವು ಅಂದಿನ ಗ್ರಾಹಕ ಕಲ್ಯಾಣ ಮತ್ತು ಆಹಾರ ಸರಬರಾಜು ಇಲಾಖೆಯಲ್ಲಿ ಕೇಂದ್ರ ಸಚಿವರಾಗಿದ್ದ ದಿವಂಗತ ವಿ.ಶ್ರೀನಿವಾಸ್ ಪ್ರಸಾದ್ ರವರು ಮತ್ತು ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಈಗೀನ ಕೊಳ್ಳೇಗಾಲದ ಹಾಲಿ ಶಾಸಕ ಎ.ಆರ್ ಕೃಷ್ಣಮೂರ್ತಿ ರವರ ಅಧಿಕಾರದ ಅವಧಿಯಲ್ಲಿ ಕೋಟ್ಯಾಂತರ ರೂ.ಖರ್ಚು ಮಾಡಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿ 2003 ರಲ್ಲಿ ಉದ್ಘಾಟನೆ ಮಾಡಲಾಯಿತು.

ಉದ್ಘಾಟನೆಯಾದ ನಂತರ ಎರಡು ಮೂರು ವರ್ಷಗಳ ಕಾಲ ಕಾರ್ಯನಿರ್ವಹಣೆಯಲ್ಲಿತ್ತು. ನಂತರ ವಿದ್ಯಾರ್ಥಿನಿಯರ ದಾಖಲಾತಿ ಕಡಿಮೆಯಾದ ಕಾರಣಕ್ಕೆ ವಸತಿ ನಿಲಯವನ್ನು ಮುಚ್ಚಲಾಯಿತು. ಕಟ್ಟಡವನ್ನು ಸ್ಥಗಿತಗೊಳಿಸಿ ಎರಡು ದಶಕಗಳು ಕಳೆದರು ಪುನಾರಂಭ ಮಾಡಲು ಅಧಿಕಾರಿಗಳು ಇಚ್ಚಾಶಕ್ತಿ ತೋರಲಿಲ್ಲ. ಕಟ್ಟಡದ ಮುಂಭಾಗದಲ್ಲಿ ಗಿಡಗಂಟಿಗಳು ಬೆಳೆದುಕೊಂಡು ಕಾಡಿನ ರೂಪವನ್ನು ತಾಳಿವೆ. ಕಟ್ಟಡದ ಒಳಗಡೆ ಪಕ್ಷಿಗಳು ಮತ್ತು ಹಾವು ಚೇಳುಗಳ ವಾಸಸ್ಥಾನವಾಗಿದೆ.
ವಿಶಾಲವಾದ 6 ಕೊಠಡಿಗಳು, ಶೌಚಾಲಯ, ಭೋಜನಾಲಯ, ಗ್ರಂಥಾಲಯ, ನಿಲಯ ಪಾಲಕರ ಕೊಠಡಿ, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿಶಾಲದ ಆವರಣ ಹೊಂದಿರುವಂತಹ ನಿಲಯವಾಗಿದೆ. ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯವು ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಇಲ್ಲಿ ಬೆಳಿಗ್ಗೆ ರಾತ್ರಿ ಎನ್ನದೆ ಮದ್ಯವ್ಯಸನಿಗಳ ಪಾಲಿಗೆ ಆಶ್ರಯ ಸ್ಥಳವಾಗಿದೆ. ಪಾಳು ಬಿದ್ದಿರುವ ಕಟ್ಟಡಕ್ಕೆ ಇನ್ನಾದರೂ ಅಧಿಕಾರಿಗಳು ಮರುಜೀವ ನೀಡುವವರೇ ಕಾದು ನೋಡಬೇಕಿದೆ.

