ನಂಜನಗೂಡು: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ನಂಜನಗೂಡು ತಾಲ್ಲೂಕು ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶನಿವಾರ ನಂಜನಗೂಡಿನ ತಾಲೂಕು ಕ್ರೀಡಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಾ. ಸ್ಮಿತಾ ರಾಮು ಅವರು ರಾಷ್ಟ್ರಧ್ವಜವನ್ನು ಹಾರಿಸಿ ಧ್ವಜಾರೋಹಣ ನೆರವೇರಿಸಿದರು. ನಂತರ ಪೊಲೀಸರು ಮತ್ತು ಶಾಲಾ ಕಾಲೇಜು ಮಕ್ಕಳಿಂದ ಗೌರವ ಪಥ ಸಂಚಲನ ನಡೆಯಿತು. ತಹಶೀಲ್ದಾರ್ ಮತ್ತು ಶಾಸಕರು ಪೆರೇಡ್ ಗೆ ಗೌರವ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ತಹಶೀಲ್ದಾರ್ ಡಾ. ಸ್ಮಿತಾ ರಾಮು, 80 ವರ್ಷದ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ನಾವು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನೆನಪಿಸಿಕೊಂಡು ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಯುವ ಜನರು ಶಿಕ್ಷಣ, ಕ್ರೀಡೆ ಮತ್ತು ಸಂಸ್ಕೃತಿಯಲ್ಲಿ ಉತ್ತಮ ಸಾಧನೆ ಮಾಡಿ ರಾಷ್ಟ್ರದ ಹೆಸರು ಬೆಳಗಿಸಬೇಕು ಎಂದು ಕರೆ ನೀಡಿದರು.
ವೇದಿಕೆ ಕಾರ್ಯಕ್ರಮವನ್ನು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಶಾಸಕ ದರ್ಶನ್ ಧ್ರುವನಾರಾಯಣ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ್, ಸ್ವಾತಂತ್ರ್ಯ ಎಂದರೆ ಕೇವಲ ಆಚರಣೆಯಲ್ಲ. ಅದು ನಮ್ಮ ಜವಾಬ್ದಾರಿಯೂ ಆಗಿದೆ. ಗಾಂಧೀಜಿ ಮತ್ತು ಅಂಬೇಡ್ಕರ್ ಅವರು ತೋರಿಸಿದ ಸಮಾನತೆ, ಸೌಹಾರ್ದತೆಯ ಹಾದಿಯಲ್ಲಿ ನಡೆಯಬೇಕು. ನಂಜನಗೂಡು ತಾಲ್ಲೂಕಿನ ಅಭಿವೃದ್ಧಿಗೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಶಾಲಾ ಕಾಲೇಜು ಮಕ್ಕಳು ದೇಶದ ಉತ್ತಮ ಪ್ರಜೆಗಳಾಗಿ ಬೆಳೆಯಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿಯ ನಿರ್ದೇಶಕ ಡಾ. ಸಂತೋಷ್ ಕುಮಾರ್ ಅವರು ಮುಖ್ಯ ಭಾಷಣ ಮಾಡಿದರು. ಅವರು ಸ್ವಾತಂತ್ರ್ಯ ಹೋರಾಟದ ಇತಿಹಾಸ ಮತ್ತು ಇಂದಿನ ಯುವಕರ ಪಾತ್ರದ ಕುರಿತು ವಿವರಿಸಿದರು. ಕಾರ್ಯಕ್ರಮದ ಅಂಗವಾಗಿ ಶಾಲಾ ಕಾಲೇಜಿನ ಮಕ್ಕಳಿಂದ ದೇಶಭಕ್ತಿ ಗೀತೆ, ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಕ್ಕಳ ಪ್ರದರ್ಶನಕ್ಕೆ ಸಭಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಡಿವೈಎಸ್ಪಿ ಧರ್ಮೇಂದ್ರ, ನಗರಸಭಾ ಆಯುಕ್ತ ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಮಾರುತಿ, ಶ್ರೀ ಕಂಠೇಶ್ವರಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಸವೇಗೌಡ ಸೇರಿದಂತೆ ಶಾಲಾ ಕಾಲೇಜಿನ ಮಕ್ಕಳು, ಸಾರ್ವಜನಿಕರು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

