ನಂಜನಗೂಡು: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲ್ಲೂಕು ಆಡಳಿತ ವತಿಯಿಂದ 77ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ದ್ರುವನಾರಾಯಣ್ ಉಪಸ್ಥಿತಿಯಲ್ಲಿ ನೂತನ ತಹಶೀಲ್ದಾರ್ ಡಾ.ಸ್ಮಿತಾ ರಾಮು ಅವರು ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣದ ಬಳಿಕ ಪೊಲೀಸ್ ಇಲಾಖೆ ಸೇರಿದಂತೆ ಪಟ್ಟಣದ ವಿವಿಧ ಶಾಲಾ ಮಕ್ಕಳಿಂದ ಆಕರ್ಷಣೀಯ ಪಥ ಸಂಚಲನ ನಡೆದು ಅತಿಥಿ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು. ಗೌರವ ವಂದನೆ ಸ್ವೀಕರಿಸಿ ತಹಶೀಲ್ದಾರ್ ಡಾ.ಸ್ಮಿತಾ ರಾಮು 77ನೇ ಗಣರಾಜ್ಯೋತ್ಸವ ಶುಭಾಶಯಗಳನ್ನು ತಿಳಿಸಿ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸಂವಿಧಾನ ಹಾಗೂ ಗಣರಾಜ್ಯೋತ್ಸವದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ದರ್ಶನ್ ಧ್ರುವನಾರಾಯಣ್ ಹಾಗೂ ಮುಖ್ಯ ಭಾಷಣಕಾರರಾದ ಪ್ರೊ. ಮಾರುತಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ಸಂವಿಧಾನ ಬರೆಯದೆ ಇದ್ದಿದ್ದರೆ ಇಂದು ದೇಶದ ಸ್ಥಿತಿಗತಿ ಏನಾಗುತ್ತಿತ್ತು ಎಂದು ಊಹೆ ಮಾಡುವುದಕ್ಕೂ ಸಾಧ್ಯವಿರಲಿಲ್ಲ. ಹಾಗಾಗಿ ಇಡೀ ವಿಶ್ವದಲ್ಲೇ ಅತಿ ದೊಡ್ಡ ಹಾಗೂ ಪ್ರಮುಖ ಸಂವಿದಾನವನ್ನು ಓದಿ ಅದರ ಆಶಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಂವಿಧಾನ ಹಾಗೂ ಗಣ ರಾಜ್ಯೋತ್ಸವದ ಬಗ್ಗೆ ತಿಳಿಸಿದರು.

ಇದೇ ಸಂದರ್ಭ ವೇದಿಕೆ ಮೇಲಿನ ಗಣ್ಯರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ಮೂವರು ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ತಲಾ 50 ಸಾವಿರ ವಿತರಣೆ ಮಾಡಿ ಸನ್ಮಾನಿಸಲಾಯಿತು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳು ದೇಶಭಕ್ತಿ ಗೀತೆಗಳು ಹಾಗೂ ಸಿನಿಮಾ ಹಾಡುಗಳಿಗೆ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಅಳವಡಿಸುವ ಮೂಲಕ ಮಾಡಿದ ಸಾಮೂಹಿಕ ನೃತ್ಯಗಳು ನೆರೆದಿದ್ದ ಜನರ ಮನಸೂರೆಗೊಂಡವು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಡಿ.ವೈ.ಎಸ್.ಪಿ ರಘು, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ನಗರಸಭಾ ಆಯುಕ್ತ ಬಸವರಾಜ್, ವೃತ್ತ ನಿರೀಕ್ಷಕ ರವೀಂದ್ರ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.