ಮೈಸೂರು : ಕೃಷಿ ಪತ್ತಿನ ಸಹಕಾರ ಸಂಘಕ್ಕೆ 75.44 ಲಕ್ಷ ನಾಮ ಹಾಕಿದ್ದು, ಮಾಜಿ ಸಿಇಓ ನಾರಾಯಣ ನಾಯ್ಕ ಮೇಲೆ ಎಫ್ಐಆರ್ ದಾಖಲಾಗಿರುವ ಘಟನೆ ಹುಣಸೂರು ತಾಲ್ಲೂಕಿನ ಧರ್ಮಾಪುರದಲ್ಲಿ ನಡೆದಿದೆ.
ಧರ್ಮಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 75.44 ಲಕ್ಷ ಹಣ ದುರುಪಯೋಗವಾಗಿದ್ದು, ಮಾಜಿ ಕಾರ್ಯನಿರ್ವಹಣಾಧಿಕಾರಿ ನಾರಾಯಣ ನಾಯ್ಕ ವಿರುದ್ದ ಹಾಲಿ ಸಿಇಓ ಬೀರಪ್ಪರಿಮದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

2022-23ರ ಅವಧಿಯಲ್ಲಿ ಹಣ ದುರುಪಯೋಗವಾಗಿರುವುದು ಲೆಕ್ಕ ಪರಿಶೋಧನಾ ವೇಳೆ ಬೆಳಕಿಗೆ ಬಂದಿದೆ. 30-06-2023 ರಂದು ನಾರಾಯಣ ನಾಯ್ಕ ನಿವೃತ್ತಿ ಹೊಂದಿದ್ದಾರೆ. ಸೂಕ್ತ ಲೆಕ್ಕಗಳನ್ನ ಪಾಲಿಸದೆ ಸಂಘಕ್ಕೆ 75,44,833/- ರೂಗಳನ್ನ ದುರುಪಯೋಗ ಮಾಡಿಕೊಂಡು ಸಂಘಕ್ಕೆ ನಷ್ಟ ಉಂಟು ಮಾಡಿದ್ದಾರೆಂದು ಆರೋಪ ಕೇಳಿಬಂದಿದೆ.
ಸಾಲಗಾರರ ಲೆಡ್ಜರ್ ನಲ್ಲಿ ಹಣ ಪಾವತಿ ಆದಂತೆ ಹಾಗೂ ಮರುಪಾವತಿ ಆದಂತೆ ನಮೂದಿಸಿ ನಗದು ಪುಸ್ತಕದಲ್ಲಿ ಜಮಾ ಮಾಡದೆ ಇರುವುದು 67,95,266/- ರೂ ಇದೆ. ಸದಸ್ಯರಿಗೆ ದಾಖಲಾತಿ ಇಲ್ಲದೆ ಸಾಲ ಮುಂಗಡ ಮಾಡಿರುವುದು 4,58,000/- ರೂ ಇದೆ. ಜಿಲ್ಲಾ ಬ್ಯಾಂಕ್ ಷೇರು ವ್ಯತ್ಯಾಸ. 63,850/- ರೂ ಇದೆ.
ಕೆಸಿಸಿ ಅಮಾನತ್ತು ಬಾಬ್ತಿಗೆ ಹೆಚ್ಚಿನ ಖರ್ಚು ತೋರಿಸಿರುವುದು 2,03,477/- ಇದೆ ಶಿಲ್ಕು ವೆತ್ಯಾಸ 24,240/- ರೂಗಳಿವೆ. ಒಟ್ಟು ನಾರಾಯಣ ನಾಯ್ಕ ಅವಧಿಯಲ್ಲಿ 75,44,833/- ರೂಗಳ ಹಣ ದುರುಪಯೋಗವಾಗಿದೆ. ಈ ಸಂಬಂಧ ನಾರಾಯಣ ನಾಯ್ಕರನ್ನ ಪ್ರಶ್ನಿಸಿದಾಗ ಸಮಂಜಸ ಉತ್ತರ ಬಂದಿರುವುದಿಲ್ಲ. ಹೀಗಾಗಿ ಕೃಷಿಪತ್ತಿನ ಸಹಕಾರ ಸಂಘಗಳ ನಿಯಮಾನುಸಾರ ನಾರಾಯಣ ನಾಯ್ಕ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.

