ಮೈಸೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನಡೆದ 6ನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ ಸುಮಾರು 340 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಶಿಲ್ಪ ಹೇಳಿದರು.

ಮೈಸೂರು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಬರುವ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ದೊಡ್ಡ ಕಾನ್ಯ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪಿರಿಯಾಪಟ್ಟಣ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ತಿ. ನರಸೀಪುರ ಈ ಶಾಲೆಗಳಲ್ಲಿ 2026-27ನೇ ಸಾಲಿನ ಆರನೇ ತರಗತಿ ಪ್ರವೇಶಾತಿ ದಾಖಲಾತಿಗಾಗಿ ಸುಮಾರು 526 ಮಕ್ಕಳು ಅರ್ಜಿಯನ್ನು ಸಲ್ಲಿಕೆ ಮಾಡಿರುತ್ತಾರೆ.

ಭಾನುವಾರ ನಡೆದ 6ನೇ ತರಗತಿ ಪ್ರವೇಶಾತಿ ಪರೀಕ್ಷೆಯಲ್ಲಿ ಸುಮಾರು 340 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 186 ಮಕ್ಕಳು ಗೈರಾಗಿದ್ದರು. ಈ ಬಾರಿ ವಿಶೇಷವಾಗಿ ಆನ್ಲೈನ್ ಹಾಜರಾತಿಯ ಮೂಲಕ 6ನೇ ತರಗತಿ ಪ್ರವೇಶ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಮಾಡಲಾಗಿದೆ. ಜಿಲ್ಲೆಯ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿತ್ತು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶಿಲ್ಪ ತಿಳಿಸಿದರು.

ದೊಡ್ಡಕಾನ್ಯ, ಪಿರಿಯಾಪಟ್ಟಣ ಮತ್ತು ತಿ.ನರಸೀಪುರ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಸತಿ ಶಾಲೆಗಳ ಪ್ರಾಂಶುಪಾಲರಾದ ಮಮತ, ಮಧುಕುಮಾರ್, ಕುಮಾರಿ, ಸ್ಥಾನಿಕ ಜಾಗೃತ ದಳ ಅಧಿಕಾರಿಗಳಾದ ಸುನೀಲ್ ಕುಮಾರ್, ಅವಿನಾಶ್ ಸೇರಿದಂತೆ ಶಿಕ್ಷಕರು, ಸಿಬ್ಬಂದಿಗಳು ಹಾಜರಿದ್ದರು.