ನಂಜನಗೂಡು: ಸರ್ಕಾರದ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಂಜನಗೂಡು ತಾಲ್ಲೂಕಿನ ದೊಡ್ಡ ಕವಲಂದೆ ಗ್ರಾಮದ ಶಾದಿ ಮಹಲ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.
ಕಾರ್ಯಕ್ರಮದಲ್ಲಿ ಒಟ್ಟು 31 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 5 ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಯಿತು. ಹಲವು ವರ್ಷಗಳಿಂದ ಬಗೆಹರಿಯದೆ ಉಳಿದಿದ್ದ ಸಮಸ್ಯೆಯೊಂದನ್ನು ಪ್ರಜಾ ಸೇವಾ ಆಂದೋಲನದ ಮೂಲಕ ಶಾಸಕರು ಸ್ಥಳದಲ್ಲೇ ಪರಿಹರಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಎಂಬ ಆಶಯದೊಂದಿಗೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಸ್ಥಳದಲ್ಲಿ ಬಗೆಹರಿಸಲಾಗದ ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಅಗತ್ಯವಿದ್ದರೆ ಸರ್ಕಾರದ ಮಟ್ಟದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಒದಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಶೀಲ್ದಾರ್ ಡಾ.ಸ್ಮಿತಾ ರಾಮು, ತಾಲೂಕು ಪಂಚಾಯಿತಿ ಇಒ ಜೆರಾಲ್ಡ್ ರಾಜೇಶ್, ನಗರಸಭಾ ಆಯುಕ್ತ ಬಸವರಾಜು, ಉಪ ತಹಶೀಲ್ದಾರ್ ಕಿರಣ್ ಕುಮಾರ್, ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

