ಮೈಸೂರು: ನೂತನ ವರ್ಷಾರಂಭದ ಅಂಗವಾಗಿ ಜ.1ರಂದು ವಿಜಯನಗರದಲ್ಲಿರುವ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮ ಮತ್ತು ಭಕ್ತರಿಗೆ ಲಕ್ಷ ತಿರುಪತಿ ಮಾದರಿಯ ಲಡ್ಡು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಾಡೋಜ. ಪ್ರೊ. ಭಾಷ್ಯಂ ಸ್ವಾಮೀಜಿಯವರು ತಿಳಿಸಿದ್ದಾರೆ.

ವಿಜಯನಗರದ ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜ.1ರಂದು ಬೆಳಗ್ಗೆ 4ಗಂಟೆಯಿಂದ ಯೋಗಾನರಸಿಂಹಸ್ವಾಮಿಗೆ ವಿಶೇಷ ಅಲಂಕಾರ ಮತ್ತು ಶ್ರೀರಂಗಂಕ್ಷೇತ್ರ ಮಧುರೈ ಕ್ಷೇತ್ರಗಳಿಂದ ತರಿಸಿರುವ ವಿಶೇಷ ತೋಮಾಲೆ ಮತ್ತು “ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ ಸಹಸ್ರನಾಮರ್ಚನೆ ಮತ್ತು ದೇವಾಲಯದ ಉತ್ಸವ ಮೂರ್ತಿಯಾದ ಶ್ರೀಮಲಯಪ್ಪನ್ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವರಿಗೆ ದೇವಾಲಯದ ಆವರಣದಲ್ಲಿ ಏಕಾದಶ ಪ್ರಾಕಾರೋತ್ಸವ ಹಾಗೂ ಇಪ್ಪತ್ತು ಕ್ವಿಂಟಾಲ್ ಪುಳಿಯೋಗರೆ ನಿವೇದನೆ ಜತೆಗೆ ದೇವಾಲಯಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಲಡ್ಡು ವಿತರಣೆ ಮಾಡಲಾಗುವುದು ಎಂದು ಹೇಳಿದರು.

1994ನೇ ಇಸವಿಯಲ್ಲಿ ಅಂದಾಜು ಒಂದು ಸಾವಿರ ಲಡ್ಡು ವಿತರಣೆಯಿಂದ ಪ್ರಾರಂಭಿಸಿ ಕಳೆದ ಹಲವಾರು ವರ್ಷಗಳಿಂದ ಪ್ರತಿ ವರ್ಷ ಒಂದು ಲಕ್ಷ ಮತ್ತು ಎರಡು ಲಕ್ಷ ಲಡ್ಡುಪ್ರಸಾದವನ್ನು ಭಕ್ತಾದಿಗಳಿಗೆ ವಿತರಣೆ ಮಾಡಲಾಗುತ್ತಿದೆ. ಈ ವರ್ಷವೂ ಸಹ ಇನ್ನೂ ಹೆಚ್ಚು ಅಂದರೆ ಎರಡು ಲಕ್ಷ ಲಡ್ಡು ವಿತರಣೆ ಮಾಡಲು ದೇವಸ್ಥಾನದ ವತಿಯಿಂದ ತಯಾರಿ ನಡೆಯುತ್ತಿದೆ. ಈ ವರ್ಷ ಅಂದಾಜು (2,000)ಗ್ರಾಂ ತೂಕದ (15,000) ಲಡ್ಡುಗಳು ಹಾಗೂ (150)ಗ್ರಾಂ ತೂಕದ (2 ಲಕ್ಷ) ಲಡ್ಡುಗಳನ್ನು ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಯಾವುದೇ ಜಾತಿ, ಮತ ಮತ್ತು ಭೇದವಿಲ್ಲದೆ ಉಚಿತವಾಗಿ ವಿತರಿಸಲಾಗುವುದು. ಲಡ್ಡು ಪ್ರಸಾದವನ್ನು ವಿಶೇಷವಾಗಿ 60 ಮಂದಿ ನುರಿತ ಬಾಣಸಿಗರಿಂದ ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.

ಡಾ.ರಾಜ್ ಕುಮಾರ್ ಪುತ್ರಿ ಲಕ್ಷ್ಮಿ , ಅಳಿಯ ಗೋವಿಂದರಾಜು ಅವರು ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡು ಡಾ ‌ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರಿಗೂ ಈ ದೇವಸ್ಥಾನಕ್ಕೂ ಬಾಂಧವ್ಯ ಹೇಗಿತ್ತು ಎನ್ನುವುದನ್ನು ಮೆಲುಕು ಹಾಕಿದರು. ಈ ವೇಳೆ ದೇವಾಲಯದ ಎನ್ ಶ್ರೀನಿವಾಸನ್‌ಅವರು ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ ಯಾವುದೇ ಜಾತಿ, ಮತಗಳ ಭೇದವಿಲ್ಲದೆ ಪ್ರಪಂಚದ ಎಲ್ಲೆಡೆ ಆಚರಿಸುವ ಕ್ರೈಸ್ತ ವರ್ಷಾರಂಭದ ಹಿನ್ನೆಲೆಯಲ್ಲಿ ವಿಶ್ವಶಾಂತಿ, ಭ್ರಾತೃತ್ವ ಮತ್ತು ಸರ್ವಧರ್ಮ ಸಮನ್ವಯತೆಗಾಗಿ ಮತ್ತು ನಾಡಿನ ಎಲ್ಲಾ ಜನರ ಒಳಿತಿಗಾಗಿ ಪ್ರಾರ್ಥಿಸಿ ಈ ಲಡ್ಡು ಪ್ರಸಾದ ನಿವೇದನೆ ಮತ್ತು ಭಕ್ತಾದಿಗಳಿಗೆ ವಿನಿಯೋಗ ಕಾರ್ಯಕ್ರಮ ನಡೆಸಲಾಗುತ್ತಿರುವುದಾಗಿ ಹೇಳಿದರು.

ಲೋಕಕಲ್ಯಾಣಾರ್ಥಕ್ಕೋಸ್ಕರ ಮತ್ತು ದೇಶದ ಎಲ್ಲಾ ಜನರ ಒಳಿತಿಗಾಗಿ, ಸಮಸ್ತ ಜನರಿಗೆ ಸುಖ ಶಾಂತಿ ನೆಮ್ಮದಿ ದೊರೆಯಲಿ ಎಂದು ಪ್ರಾರ್ಥಿಸುವ ಮತ್ತು ಎಲ್ಲಾ ಭಕ್ತಾದಿಗಳು ಒಂದೇ ಎಂದು ಸಾರುವ ಏಕೈಕ ದೃಷ್ಠಿಯಿಂದ ಈ ಎಲ್ಲಾ ಕಾರ್ಯಕ್ರಮಗಳು ಪರಮ ಪೂಜ್ಯ ಪ್ರೊ. ಭಾಷ್ಯಂಸ್ವಾಮೀಜಿಯವರ ದಿವ್ಯನೇತೃತ್ವದಲ್ಲಿ ವಿಶೇಷ ಪ್ರಾರ್ಥನೆಯಿಂದ ನೆರವೇರಲಿದೆ. ಭಕ್ತರು ದೇಗುಲದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಅವರು ಕೋರಿದ್ದಾರೆ.