ನಂಜನಗೂಡು: ದೇವರಸನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಬರೋಬರಿ ಎರಡು ಕೋಟಿ ರೂ. ಭ್ರಷ್ಟಾಚಾರದ ಹಗರಣ ನಡೆದಿದೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮಾಜಿ ಗ್ರಾಮ ಪಂಚಾಯಿತಿಯ ಸದಸ್ಯ ಮಹದೇವು ಆಗ್ರಹಿಸಿದರು.

ನಂಜನಗೂಡು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ನಡೆದಿದ್ದು 2020 ರಿಂದ2025 ರವರೆಗೆ ಅಂದಾಜು ಎರಡು ಕೋಟಿಗೂ ಹೆಚ್ಚಿನ ಹಣವನ್ನು ಗುಳುಂ ಮಾಡಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಪ್ರತಿ ವರ್ಷ ಲಕ್ಷಾಂತರ ರೂಪಾಯಿಗಳ ಅನುದಾನಗಳನ್ನು ನೀಡುತ್ತಿದೆ. ಆದರೆ, ಗ್ರಾಮ ಪಂಚಾಯತಿಗಳ ಅಭಿವೃದ್ಧಿಯ ನೆಪದಲ್ಲಿ ಲಕ್ಷಾಂತರ ಹಣವನ್ನು ಭ್ರಷ್ಟ ಅಧಿಕಾರಿಗಳ ಜೆಬಿಗೆ ಸೇರುತ್ತಿದೆ. ದೇವರಸನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಸಾಮಗ್ರಿಗಳ ಖರೀದಿಯಲ್ಲಿ ಬಿಲ್ಲುಗಳು ತಾಳೆಯಾಗುತ್ತಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾದ ಹಣವೂ ಲೂಟಿಯಾಗಿದೆ. ವಿಕಲಚೇತನರ ಹಣ ದುರುಪಯೋಗ, ಸ್ಮಶಾನಗಳ ಅಭಿವೃದ್ಧಿಯ ನೆಪದಲ್ಲಿ ಚರಂಡಿ ಮತ್ತು ಪೈಪ್ ಲೈನ್ ಅಳವಡಿಕೆಯಲ್ಲಿ ಕಳಪೆ ಕಾಮಗಾರಿ ನಡೆಸಿ ಹಣ ಲಪಟಾಸಿದ್ದಾರೆ. ಗ್ರಾಮವಿಕಾಸ್ ಯೋಜನೆಯಲ್ಲಿ ಕಾಮಗಾರಿ ನಡೆಯುವ ಮುಂಚೆ ಹಣ ಬಿಡುಗಡೆ ಮತ್ತು ದುರುಪಯೋಗ ಮಾಡಿರುವ ಬಗ್ಗೆ ಪೂರಕ ದಾಖಲೆ ಇದೆ ಎಂದರು.

ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸಿದ ಅಭಿವೃದ್ಧಿ ಅಧಿಕಾರಿಗಳಾದ ಯಾಸಿನ್ ಶರೀಫ್, ಮಹದೇವಸ್ವಾಮಿ, ಶಬಾನ, ಚೈತ್ರ, ಮಾದಪ್ಪ ಇವರ ಅವಧಿಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಗಂಭೀರವಾಗಿ ಆರೋಪಿಸಿದರು. ಏಷಿಯನ್ ಪೈಂಟ್ ಕಂಪನಿಯು ದೇವರಸನಹಳ್ಳಿ ಗ್ರಾಮದ ಕೆರೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದಾರೆ. ಅದನ್ನು ನಾವು ಮಾಡಿದ್ದೇವೆ ಎಂದು ಬಿಲ್ ಮಾಡಿಕೊಂಡಿದ್ದಾರೆ.

ಪಿಡಿಒ ಮಾದಪ್ಪನವರು ಅಭಿವೃದ್ಧಿ ಅಧಿಕಾರಿಯಾಗಿ ಬಂದ ನಂತರ ಸಾಕಷ್ಟು ಭ್ರಷ್ಟಾಚಾರ ಮಿತಿಮೀರದೆ. ಭ್ರಷ್ಟಾಚಾರ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕು ಮತ್ತು ಸೂಕ್ತ ತನಿಖೆ ನಡೆಸಿ ಹಣವನ್ನು ಸರ್ಕಾರಕ್ಕೆ ವಾಪಸ್ ನೀಡಬೇಕು. ಈಗಾಗಲೇ ಮೈಸೂರು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕರು ಮತ್ತು ನಂಜನಗೂಡು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಶೋಕಾಸ್ ನೋಟಿಸ್ ನೀಡುವುದನ್ನು ಬಿಟ್ಟರೆ ಬೇರೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಅಧಿಕಾರಿಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.