ನಂಜನಗೂಡು: ವಿವಿಧ ಕಾಮಗಾರಿಗಳಲ್ಲಿ ಅಕ್ರಮವೆಸಗಿ ಬರೋಬರಿ ಎರಡು ಕೋಟಿ ರೂ.ಅನುದಾನವನ್ನು ನುಂಗಿ ನೀರು ಕುಡಿದಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿ ದೇವರಸನಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಎಂ.ಮಹದೇವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಂಜನಗೂಡು ನಗರದ ತಾಲ್ಲೂಕು ಪಂಚಾಯಿತಿ ಕಛೇರಿಯ ಮುಂಭಾಗದಲ್ಲಿ ಮಾಜಿ ಗ್ರಾ.ಪಂ ಸದಸ್ಯ ಎಂ. ಮಹದೇವ್ ಮತ್ತು ಗ್ರಾಮದ ಮುಖಂಡರು ಜಮಾಯಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಗ್ರಾಪಂ ಸದಸ್ಯ ಎಂ.ಮಹದೇವ್ ಮಾತನಾಡಿ, ದೇವರಸನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ನಡೆದು ಐದು ತಿಂಗಳು ಕಳೆದರು ಯಾವುದೇ ತನಿಖೆ ಮಾಡಿಲ್ಲ. ಸುಮಾರು 2 ಕೋಟಿ ಅನುದಾನವು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು. ಗ್ರಾ.ಪಂ ವ್ಯಾಪ್ತಿಯ ಗೋಳೂರು, ದೇವರಸನಹಳ್ಳಿ, ಹೊಸೂರು, ಕೆಬ್ಬೇಪುರ, ಉಪ್ಪಿನಹಳ್ಳಿ, ಕೋಡಿ ನರಸೀಪುರ ಗ್ರಾಮಗಳ ಅಭಿವೃದ್ಧಿಯಲ್ಲಿ 2020ರಿಂದ 2025ರ ವರೆಗೆ ಸುಮಾರು 2 ಕೋಟಿ ಅನುದಾನವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ತಾ.ಪಂ, ಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೂ ದೂರು ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿದರು ಕ್ರಮ ಕೈಗೊಂಡಿಲ್ಲ. ಭ್ರಷ್ಟಾಚಾರದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ಯಾಶಿನ್ ಶರೀಫ್, ಶಬಾನ, ಮಾದಪ್ಪ, ಚೈತ್ರ ಎಂಬ ಅಧಿಕಾರಿಗಳು ಮತ್ತು ಅಧ್ಯಕ್ಷರಾಗಿದ್ದ ಮಂಗಳಮ್ಮ ರವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು. ಪಿಡಿಒ ಮಾದಪ್ಪ ರವರು 48 ಲಕ್ಷವನ್ನು ಬಿಲ್ ಮಾಡಿಕೊಂಡು ಸ್ವಂತ ಖರ್ಚಿಗೆ ಬಳಸಿಕೊಂಡಿದ್ದಾರೆ. 10.50 ಲಕ್ಷ ಗಳನ್ನು ಕಂದಾಯ ವಸೂಲಿ ಮಾಡಿದ್ದಾರೆ ಆದರೆ, ದಾಖಲೆ ಇಲ್ಲ. ಈ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು. ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.

14 ಮತ್ತು 15 ನೇ ಹಣಕಾಸು ಅನುದಾನದಲ್ಲಿ ಅಕ್ರಮವಾಗಿ ಕಾಮಗಾರಿ ನಡೆಸಿ ಎರಡು ಬಿಲ್ಲುಗಳನ್ನು ಮಂಜೂರು ಮಾಡಲಾಗಿದೆ. ಕಸದ ಬುಟ್ಟಿ ಖರೀದಿಯಲ್ಲಿ ಸುಮಾರು ಎಂಟು ಲಕ್ಷ ಹಣವನ್ನು ದುರುಪಯೋಗ ಮಾಡಲಾಗಿದೆ. ಕುಡಿಯುವ ನೀರಿನ ಸಾಮಾನುಗಳ ಖರೀದಿಯಲ್ಲಿ ನಕಲಿ ಬಿಲ್ ತಯಾರಿಸಿ ಹಣವನ್ನು ಗುಳುಂ ಮಾಡಲಾಗಿದೆ. ಸ್ಮಶಾನಗಳ ಅಭಿವೃದ್ಧಿಯಲ್ಲಿ ಲಕ್ಷಾಂತರ ಹಣ ಬಿಡುಗಡೆಯಾದರೂ ಯಾವುದೇ ಕಾಮಗಾರಿಯನ್ನು ನಡೆಸಿಲ್ಲ. ಒಂದು ಕೋಟಿ ರೂ. ವೆಚ್ಚದ ಗ್ರಾಮ ವಿಕಾಸ್ ಯೋಜನೆಯಲ್ಲಿ ಮಂಜೂರಾದ ಹಣವನ್ನು ಜಿಲ್ಲಾ ಪಂಚಾಯಿತಿಯ ಅನುಮೋದನೆ ಇಲ್ಲದೆ ಕಾಮಗಾರಿಗಳಿಗೆ ಮತ್ತು ಖರೀದಿಗಳಿಗೆ ಸುಮಾರು 40 ಲಕ್ಷ ರೂ. ಹಣವನ್ನು ಲಪಟಾಯಿಸಿದ್ದಾರೆ.

ಗ್ರಂಥಾಲಯ ಕಟ್ಟಡ ಅಭಿವೃದ್ಧಿ ವಿಚಾರದಲ್ಲಿ ಪುಸ್ತಕಗಳ ಖರೀದಿಯಲ್ಲೂ 23 ಲಕ್ಷ ಹಣವನ್ನು ದುರ್ಬಳಕೆ ಮಾಡಿದ್ದಾರೆ. ಒಂದೇ ಸೋಲಾರ್ ವಿದ್ಯುತ್ ದೀಪಕ್ಕೆ ಬಿಲ್ಲುಗಳನ್ನು ಬಿಡುಗಡೆ ಮಾಡಿ ಲಕ್ಷಾಂತರ ಹಣವನ್ನು ಲೂಟಿ ಮಾಡಿದ್ದಾರೆ. ಗ್ರಾ.ಪಂ ವತಿಯಿಂದ ಕೆರೆಯನ್ನು ಅಭಿವೃದ್ಧಿ ಮಾಡಿಲ್ಲ. ಆದರೆ, ಸುಮಾರು 2.5 ಲಕ್ಷ ರೂ ಹಣವನ್ನು ಬಿಲ್ಲು ಮಾಡಿಕೊಂಡಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಲ್ಲಿ ಸುಮಾರು 65 ಲಕ್ಷ ರೂ. ಅನುದಾನ ಬಿಡುಗಡೆಯಾಗಿ ಕೆಲಸ ಪೂರ್ಣವಾಗದೆ ಅರ್ಧಕ್ಕೆ ಕಾಮಗಾರಿ ನಿಂತಿದೆ. ಆದರ್ಶ ಗ್ರಾಮ ಯೋಜನೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ 40 ಲಕ್ಷ ರೂ. ಬಿಡುಗಡೆಯಾಗಿತ್ತು. ಕಾಮಗಾರಿ ಪೂರ್ಣಗೊಂಡಿಲ್ಲ ಆದರೂ ಬಿಲ್ ಮಾಡಿಕೊಂಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಮನೆಗಳ ಇ- ಸ್ವತ್ತು ವಿಚಾರದಲ್ಲೂ 992 ಖಾತೆಗಳನ್ನು ಅಕ್ರಮವಾಗಿ ಮಾಡಿದ್ದಾರೆ. ಸುಮಾರು 9.5 ಲಕ್ಷ ರೂಪಾಯಿ ಹಣವನ್ನು ಪಿಡಿಒ ಮಾದಪ್ಪ ರವರ ಬ್ಯಾಂಕಿನ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ದೇವರಸನಹಳ್ಳಿ ಗ್ರಾಮದ ಕೆಲವು ರಸ್ತೆಗಳು ಮತ್ತು ಸ್ಮಶಾನದ ರಸ್ತೆ ಅಭಿವೃದ್ಧಿಗೆ ಸುಮಾರು 50 ಲಕ್ಷ ರೂ. ಹಣವನ್ನು ಶಾಸಕರ ನಿಧಿಯಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, ಈ ರಸ್ತೆಗಳು ಕಳಪೆಯಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್ ರವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ದೇವರಸನಹಳ್ಳಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ವೆಂಕಟೇಶ್, ಮಾಜಿ ಗ್ರಾಪಂ ಸದಸ್ಯರಾದ ಮಹದೇವಸ್ವಾಮಿ, ನಿಧಿ ಸುರೇಶ್, ಮಂಜುನಾಥ್, ದಸಂಸ ಬಣ ರಹಿತ ಆಲತ್ತೂರು ಶಿವರಾಜ್, ಉಪ್ಪನಹಳ್ಳಿ ಸೋಮಣ್ಣ, ರಮೇಶ್, ಶೇಷ, ಸತೀಶ್, ಮಲ್ಲಣ್ಣ, ಪ್ರಕಾಶ್, ಶಂಕರ್, ನಾಗಯ್ಯ, ಕರಿಯಯ್ಯ, ನಾರಾಯಣ್ ಸೇರಿದಂತೆ ಹಲವರು ಹಾಜರಿದ್ದರು.