ಹನೂರು: ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು 27ದಿನಗಳ ಅವಧಿಯಲ್ಲಿ 2,70,10,492ರೂ ಗಳು ಸಂಗ್ರಹವಾಗಿದೆ.
ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಇಂದು ಬೆಳಿಗ್ಗೆ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗಳು, ಶ್ರೀ ಸಾಲೂರು ಬೃಹನ್ಮಠಾಧ್ಯಕ್ಷರು ರವರ ದಿವ್ಯಸಾನಿದ್ಯದಲ್ಲಿ ಶ್ರೀ ರಘು, ಎ. ಈ, ಕ.ಆ.ಸೇ, (ಹಿ.ಶ್ರೇಣಿ) ಮಾನ್ಯ ಕಾರ್ಯದರ್ಶಿಗಳು ರವರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.
16/10/2025 ರಿಂದ 11/11/2025 ರವರೆಗೆ ಒಟ್ಟು 27ದಿನಗಳಲ್ಲಿ ಒಟ್ಟು 2,70,10,492 ರೂ ಗಳು ಸಂಗ್ರಹವಾಗಿದೆ. ದೀಪಾವಳಿ ಜಾತ್ರೆ ಹಾಗೂ ವಿಶೇಷ ದಿನಗಳು, ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದಿದ್ದಾರೆ. (ಹುಂಡಿ ಮತ್ತು ಇ-ಹುಂಡಿ ಸೇರಿ) ಹಾಗೂ ಚಿನ್ನ 43ಗ್ರಾಂ, ಬೆಳ್ಳಿ 01 ಕೆ.ಜಿ 600 ಗ್ರಾಂ ಹುಂಡಿಯಲ್ಲಿ ದೊರೆತಿದೆ. 40 ವಿದೇಶಿ ನೋಟುಗಳು ಹಾಗೂ ಚಾಲ್ತಿಯಲ್ಲಿರದ 2,000 ರೂ ಮುಖಬೆಲೆಯ 10ನೋಟುಗಳು ದೊರೆತಿದೆ.
ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಶ್ರೀ ಮರಿಸ್ವಾಮಿ, ಕಾಗಲವಾಡಿ, ಪ್ರಾಧಿಕಾರದ ಹಣಕಾಸು ಮತ್ತು ಲೆಕ್ಕ ಪತ್ರ ಸಲಹೆಗಾರರಾದ ಶ್ರೀ ಮಹದೇವು, ಉಪ ಕಾರ್ಯದರ್ಶಿ ಶ್ರೀ ಚಂದ್ರಶೇಖರ.ಜಿ.ಎಲ್, ಲೆಕ್ಕಧೀಕ್ಷಕರಾದ ಶ್ರೀ ಗುರುಮಲ್ಲಯ್ಯ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಛೇರಿಯ ಶ್ರೀಮತಿ ಭಾರತಿ, ಬೆರಳಚ್ಚುಗಾರರು ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಪ್ ಬರೋಡ ಮುಖ್ಯ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಜರಿದ್ದರು.

