ನಂಜನಗೂಡು: 112 ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ನಂಜನಗೂಡು ತಾಲ್ಲೂಕಿನ ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನದಗುಡಿ ಹುಂಡಿ ಗ್ರಾಮದಲ್ಲಿ ನಡೆದಿದೆ.

ಚಿನ್ನದಗುಡಿಹುಂಡಿ ಗ್ರಾಮದ ಸ್ವಾಮಿ ಎಂಬುವವರು ಗಲಾಟೆ ನಡೆಯುತ್ತಿರುವ ಬಗ್ಗೆ 112 ಕಂಟ್ರೋಲ್ ನಂಬರ್ ಗೆ ಕರೆ ಮಾಡಿ, ದೂರು ಸಲ್ಲಿಸಿದರು. ಕೂಡಲೇ ಎಚ್ಚೆತ್ತ ಕವಲಂದೆ ಮತ್ತು ಬಿಳಿಗೆರೆ ಪೊಲೀಸ್ ಠಾಣೆಯ 112 ತುರ್ತು ವಾಹನದ ಪೊಲೀಸ್ ಸಿಬ್ಬಂದಿಗಳು ಗ್ರಾಮಕ್ಕೆ ತೆರಳಿದ್ದರು.

ಪೊಲೀಸರು ಮಧ್ಯೆ ಪ್ರವೇಶಿಸಿ ಜಗಳವನ್ನು ಬಿಡಿಸುತ್ತಿದ್ದ ವೇಳೆ ರವಿ ಮತ್ತು ಕಿಶೋರ್ ಎಂಬುವವರು ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ.

ಸಮವಸ್ತ್ರದಲ್ಲಿದ್ದ ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು, ಹಲ್ಲೆ ನಡೆಸಿದ ರವಿ ಮತ್ತು ಕಿಶೋರ್ ಎಂಬುವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.