News Karnataka Kannada
Friday, May 03 2024
ಮೈಸೂರು

ಮೈಸೂರು ದಸರಾ ಜಂಬೂಸವಾರಿಯ ಸೂತ್ರಧಾರಿಗಳು..!

New Project 2021 09 11t175302.415
Photo Credit :

ಮೈಸೂರು: ಮೈಸೂರು ದಸರಾದಲ್ಲಿ ಗಜಪಡೆಯದ್ದೇ ಕಾರುಬಾರು.. ಗಜಪಡೆಯಿಲ್ಲದ ದಸರಾವನ್ನು ಯಾರಿಂದಲೂ  ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಗಜಪಡೆ ಮೈಸೂರು ಅರಮನೆಗೆ ಪ್ರವೇಶ ಪಡೆದ ದಿನದಿಂದಲೇ ದಸರಾಕ್ಕೆ ಕಳೆ ಬರುತ್ತದೆ.

ಸೆ.13ರಂದು ನಾಗರಹೊಳೆಯ ವೀರನಹೊಸಳ್ಳಿಯಲ್ಲಿ ಗಜಪಯಣ ನಡೆಯಲಿದ್ದು, ಈ ಬಾರಿ ಗಜಪಯಣ ಸರಳವಾಗಿ  ನಡೆಯಲಿದೆ. ಅಂದೇ ಮೈಸೂರಿಗೆ ಆಗಮಿಸಲಿರುವ ಗಜಪಡೆ ನಗರದ ಅರಣ್ಯಭವನದಲ್ಲಿ ಬೀಡು ಬಿಡಲಿದೆ. ಆ ನಂತರ ಸೆಪ್ಟೆಂಬರ್ 16 ರಂದು ಮೈಸೂರು ಅರಮನೆಗೆ ಪ್ರವೇಶ ಪಡೆಯಲಿದೆ.

ಇನ್ನು ಈ ಬಾರಿ ಎಂಟು ಆನೆಗಳು ವಿವಿಧ ಆನೆಶಿಬಿರಗಳಿಂದ ಜಂಬೂಸವಾರಿಗೆ ಬರುತ್ತಿದ್ದು ಅವುಗಳ ಬಗ್ಗೆ ನೋಡುವುದಾದರೆ, ಕಳೆದ ವರ್ಷ ಅಂಬಾರಿ ಹೊತ್ತ ಅಭಿಮನ್ಯು ಈ ಬಾರಿಯೂ ಅಂಬಾರಿ ಹೊರಲಿದ್ದು ಆತನ ಜತೆಗೆ ಇನ್ನು ಏಳು ಆನೆಗಳು ಪಾಲ್ಗೊಂಡು ಜಂಬೂಸವಾರಿಗೆ ಮೆರಗು ನೀಡಲಿವೆ. ಹಾಗಾದರೆ ಈ ಬಾರಿ ಅಭಿಮನ್ಯು ಜತೆ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲಿರುವ ಗಜಪಡೆಯಲ್ಲಿ ಅಶ್ವತ್ಥಾಮ ಹೊಸಬನಾಗಿದ್ದಾನೆ. ಉಳಿದಂತೆ ಗೋಪಾಲಸ್ವಾಮಿ, ವಿಕ್ರಮ, ಕಾವೇರಿ, ಚೈತ್ರ, ಲಕ್ಷ್ಮಿ, ಧನಂಜಯ ಇದ್ದಾರೆ.

ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಬಗ್ಗೆ ಹೇಳುವುದಾದರೆ, 56ವರ್ಷ ಪ್ರಾಯದ  ಈತ, ಕೂಬಿಂಗ್ ಸ್ಪೆಷಲಿಸ್ಟ್ ಆಗಿದ್ದು, ಮತ್ತಿಗೋಡು ಆನೆ ಶಿಬಿರದಿಂದ ಬಂದಿದ್ದು, ಈತನನ್ನು 1970 ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೆಶದಲ್ಲಿ ಸೆರೆ ಹಿಡಿಯಲಾಗಿದೆ. ಕಾಡಾನೆ, ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಹಾಗೂ ಆನೆ ಪಳಗಿಸುವುದರಲ್ಲಿ ನಿಸ್ಸೀಮನಾಗಿರುವ ಈತ ಇದುವರೆಗೆ 150ಕ್ಕೂ ಹೆಚ್ಚು ಕಾಡಾನೆ ಹಾಗೂ 50 ಹುಲಿಗಳನ್ನು ಸೆರೆ ಹಿಡಿಯುವಲ್ಲಿ ಸಹಕರಿಸಿರುವುದು ವಿಶೇಷವಾಗಿದೆ.  2.72 ಮೀ. ಎತ್ತರ, 3.51 ಮೀ. ಉದ್ದವಿದ್ದು 4770 ಕೆಜಿ ತೂಕವಿದ್ದಾನೆ. ಈತನಿಗೆ  ಮಾವುತನಾಗಿ ವಸಂತ, ಕಾವಡಿಯಾಗಿ ರಾಜು ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ನು ಗಜಪಡೆಗೆ ಹೊಸಬನಾಗಿರುವ ಅಶ್ವತ್ಥಾಮ ನನ್ನು ಕಳೆದ ನಾಲ್ಕು ವರ್ಷಗಳ ಹಿಂದೆ  ಹಾಸನ ಜಿಲ್ಲೆಯ ಸಕಲೇಶಪುರ ಕಾಡಂಚಿನಲ್ಲಿ ಪುಂಡಾಟ ಮಾಡುತ್ತಿದ್ದಾಗ 2017ರಲ್ಲಿ ಸೆರೆಹಿಡಿಯಲಾಗಿದೆ. ಇದೀಗ ಮೊದಲ ಬಾರಿಗೆ ದಸರಾ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ಈತನಿಗೆ  ದೊಡ್ಡಹರವೆ ಆನೆ ಶಿಬಿರದಲ್ಲಿ ತರಬೇತಿ ನೀಡಲಾಗಿದೆ. 34 ವರ್ಷ ಪ್ರಾಯದ ಈತ 2.85 ಮೀಟರ್ ಎತ್ತರ, 3.46 ಮೀಟರ್ ಉದ್ದ ಹೊಂದಿದ್ದು, 3630 ಕೆಜಿ ತೂಕ ಹೊಂದಿದ್ದಾನೆ. ಸಮತಟ್ಟಾದ ಬೆನ್ನು ಹೊಂದಿರುವ ಈತ  ಭವಿಷ್ಯದಲ್ಲಿ ಅಂಬಾರಿ ಹೊರುವ ಲಕ್ಷಣ ಹೊಂದಿದ್ದಾನೆ. ಸದ್ಯ ಈತನಿಗೆ ಮಾವುತ ಶಿವು ಹಾಗೂ ಕಾವಡಿಯಾಗಿ ಗಣೇಶ ಕೆಲಸ ಮಾಡುತ್ತಿದ್ದಾರೆ.

ಮತ್ತಿಗೋಡು ಆನೆ ಶಿಬಿರದಿಂದ ಬಂದಿರುವ ಗೋಪಾಲಸ್ವಾಮಿಗೆ 38 ವರ್ಷ ಪ್ರಾಯವಾಗಿದ್ದು 2.85 ಮೀ. ಎತ್ತರ ಹಾಗೂ 3.42 ಮೀಟರ್ ಉದ್ದವಿರುವ ಮತ್ತು 4420 ಕೆ.ಜಿ. ತೂಕವಿದೆ. ಇದನ್ನು 2009ರಲ್ಲಿ ಸಕಲೇಶಪುರದ ಹೆತ್ತೂರಿನಲ್ಲಿ ಸೆರೆ ಹಿಡಿಯಲಾಯಿತು. ಕಾಡಾನೆ ಮತ್ತು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಈತ 2012 ರಿಂದ  ದಸರಾ ಉತ್ಸವದಲ್ಲಿ ಭಾಗವಹಿಸುತ್ತಿದ್ದಾನೆ. ಈತನಿಗೆ ಮಾವುತನಾಗಿ ಜೆ.ಡಿ. ಮಂಜು. ಕಾವಡಿಯಾಗಿ ಸೃಜನ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ದುಬಾರೆ ಆನೆ ಶಿಬಿರದ ಕಾವೇರಿಗೆ 44 ವರ್ಷ ಪ್ರಾಯ. ಕಳೆದ 9 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿದ್ದು, 2.60 ಮೀ ಎತ್ತರ ಹಾಗೂ 3.32 ಉದ್ದ, 3220 ಕೆಜಿ ತೂಕವಿದೆ. 2009ರಲ್ಲಿ ಸೋಮವಾರಪೇಟೆಯ ಆಡಿನಾಡೂರು ಅರಣ್ಯದಲ್ಲಿ ಸೆರೆ ಹಿಡಿಯಲಾಗಿದೆ. ಮಾವುತನಾಗಿ ಡೋಬಿ ಮತ್ತು ಕಾವಡಿಯಾಗಿ  ರಂಜನ್  ಇದನ್ನು ನೋಡಿಕೊಳ್ಳುತ್ತಿದ್ದಾರೆ.

ರಾಮಾಪುರ ಆನೆ ಶಿಬಿರದಿಂದ ಬಂದಿರುವ ಇಪ್ಪತ್ತರ ಪ್ರಾಯದ ಲಕ್ಷ್ಮೀ ಈ ಹಿಂದೆ 2019ರಲ್ಲಿ ನಡೆದ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಳು. ತಾಯಿಂದ ಬೇರ್ಪಟ್ಟು ಅನಾಥಳಾಗಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಆರೈಕೆ ಮಾಡಿದ್ದಾರೆ. ಆನೆ ಮತ್ತು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅನುಭವವಿದೆ. 2.23 ಮೀಟರ್ ಎತ್ತರ, 2.60 ಮೀಟರ್ ಉದ್ದ ಮತ್ತು 2540 ಕೆ.ಜಿ. ತೂಕ ಹೊಂದಿದ್ದಾಳೆ. ಮಾವುತನಾಗಿ ಚಂದ್ರ ಮತ್ತು ಕಾವಡಿಯಾಗಿ ಲವ ಕಾರ್ಯ ನಿರ್ವಹಿಸುತ್ತಿದ್ದಾರೆ.

ದುಬಾರೆ ಆನೆ ಶಿಬಿರದಿಂದ ಬಂದಿರುವ  ಧನಂಜಯ ಕಳೆದ ಮೂರು ವರ್ಷಗಳಿಂದ ದಸರಾ ಉತ್ಸವದಲ್ಲಿ ಭಾಗವಹಿಸುತ್ತಿದ್ದು, 2013 ರಲ್ಲಿ ಹಾಸನ ಜಿಲ್ಲೆ ಯಸಳೂರಿನಲ್ಲಿ ಸೆರೆ ಹಿಡಿಯಲಾಗಿದೆ. 43 ವರ್ಷ ಪ್ರಾಯದ ಈತ 2.93 ಮೀಟರ್ ಎತ್ತರ, 3.84 ಮೀಟರ್ ಉದ್ದ ಮತ್ತು 4050 ಕೆ.ಜಿ. ತೂಕವಿದ್ದಾನೆ. ಭಾಸ್ಕರ್ ಮಾವುತನಾಗಿ ಮತ್ತು ಮಣಿ ಕಾವಡಿಯಾಗಿ ಕೆಲಸ ಮಾಡುತ್ತಿದ್ದು, ಕಾಡಾನೆ ಮತ್ತು ಹುಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಅನುಭವ ಹೊಂದಿದೆ.

ದುಬಾರೆ ಆನೆ ಶಿಬಿರದ ವಿಕ್ರಮನಿಗೆ ಈಗ 58 ವರ್ಷ ಪ್ರಾಯವಾಗಿದ್ದು, ಕಳೆದ 18 ವರ್ಷಗಳಿಂದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು