ಮೈಸೂರು: ಮದುವೆಯಾಗುವುದಾಗಿ ನಂಬಿಸಿ ಯುವತಿ ತಾಯಿಯಾಗುವುದಕ್ಕೆ ಕಾರಣನಾದ ಪ್ರಿಯಕರನೇ ಬೇಕೆಂದು ಯುವತಿ ಆರು ದಿನದ ಮಗುವಿನೊಂದಿಗೆ ಪ್ರಿಯಕರನ ಮನೆಯ ಮುಂದೆ ಧರಣಿ ಕೂತಿರುವ ಘಟನೆ ನಂಜನಗೂಡು ತಾಲೂಕಿನ ಅಳಗಂಚಿಪುರದಲ್ಲಿ ನಡೆದಿದೆ.
ಪ್ರಕರಣದ ಹಿನ್ನೆಲೆ
ಜಿಲ್ಲೆಯ ನಂಜನಗೂಡು ತಾಲೂಕಿನ ಅಳಗಂಜಿಪುರ ಗ್ರಾಮದ ಯುವಕ ಅನಿತ್ ಕುಮಾರ್ 3 ವರ್ಷಗಳಿಂದ ನಗರದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, 20 ವರ್ಷದ ಯುವತಿಯ ಪ್ರೀತಿಸುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಯುವತಿಯನ್ನು ಗರ್ಭಿಣಿಯಾಗಿಸಿದ್ದ. ಆಗ ಯುವಕ ನೀನು ಬೇರೆ ಜಾತಿ ಎಂದು ಹೇಳುತ್ತಾ ಗರ್ಭಪಾತ ಮಾಡಿಸುವಂತೆ ಹೇಳಿದ್ದಾನೆ.
ಕಳೆದ ಆರು ದಿನಗಳ ಹಿಂದೆ ಯುವತಿ ತನ್ನ ತಾಯಿಯ ಮನೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿನೊಂದಿಗೆ ಅಳಗಂಜಿಪುರಕ್ಕೆ ಬಂದಿರುವ ಯುವತಿ ಅನಿತ್ ಕುಮಾರ್ ಮನೆಯ ಮುಂದೆ ಧರಣಿ ಕುಳಿತು ಪ್ರಿಯಕರನೇ ಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾಳೆ. ಸದ್ಯ ಯುವಕ ಮನೆಯಿಂದ ಪರಾರಿಯಾಗಿದ್ದಾನೆ.
ಈ ಸಂಬಂಧ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಯುವತಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಾರಿಯಾಗಿರುವ ಯುವಕನ ಬಂಧನ ಬಲೆ ಬೀಸಿದ್ದಾರೆ.