ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಭಾರಿ ಮಳೆ ಪರಿಣಾಮ ಅನೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ರಸ್ತೆಗಳು ಕೂಡ ನದಿಯಂತಾಗಿವೆ.
ಪರಿಣಾಮವಾಗಿ ಹಲವು ಪ್ರಮುಖ ಪ್ರದೇಶಗಳ ನಡುವಿನ ರಸ್ತೆ ಸಂಪರ್ಕವೇ ಕಡಿತಗೊಂಡಿದೆ. ಮಂಗಳೂರು ಬೆಂಗಳೂರು ನಡುವಣ ಸಂಚಾರ ಭಾಗಶಃ ಬಂದ್ ಆಗಿದೆ. ಪರಿಣಾಮವಾಗಿ ಬೆಂಗಳೂರಿನಿಂದ ಊರುಗಳಿಗೆ ಹೊರಟಿದ್ದ ಪ್ರಯಾಣಿಕರು ಮತ್ತು ತಮ್ಮ ತಮ್ಮ ಊರುಗಳಿಂದ ರಾಜಧಾನಿಗೆ ಹೊರಟಿಟಿದ್ದವರು ಗುರುವಾರ ರಾತ್ರಿ ಅರ್ಧ ದಾರಿಯಲ್ಲಿ ಪರದಾಡುವಂತಾಯಿತು.
ಇನ್ನು ನಿರಂತರ ಮಳೆಗೆ ಕಳಸದಿಂದ ಹೊರನಾಡು ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಬದಲಿ ಮಾರ್ಗ ಹಳುವಳ್ಳಿ ಮೂಲಕ ಸಂಚಾರ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ ಕಳಸ ಸಂಪೂರ್ಣವಾಗಿ ರಸ್ತೆ ಮಾರ್ಗದ ಸಂಪರ್ಕ ಕಳೆದುಕೊಂಡಂತಾಗಿದೆ.
ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಬೆಳ್ತಂಗಡಿ ತಾಲೂಕಿನ ಶಿಶಿಲೇಶ್ವರ ದೇವಾಲಯದ ಒಳಗೆ ನೀರು ನುಗ್ಗಿದೆ. ಮತ್ಸ್ಯ ತೀರ್ಥ ಎಂದೇ ಪ್ರಸಿದ್ದ ಪಡೆದಿರುವ ಶಿಶಿಲ ಕ್ಷೇತ್ರದ ಅಂಗಣದ ವರಗೆ ನೀರು ಬಂದಿದೆ. ದೇವಾಲಯದ ಪಕ್ಕದಲ್ಲೇ ಕಪಿಲಾ ನದಿ ಹರಿಯುತ್ತಿದ್ದು ಗ್ರಾಮಸ್ಥರು ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ.
ಕೊಪ್ಪ ತಾಲೂಕಿನ ಮೇಗೂರು ಗ್ರಾಮದಲ್ಲಿ 20 ಅಡಿಯಷ್ಟು ಕಂದಕ ಸೃಷ್ಟಿಯಾಗಿ ಮನೆ ಕುಸಿಯುವ ಭೀತಿ ಎದುರಾಗಿದೆ. ಖಾನಾಪುರ ತಾಲೂಕಿನ ಹಾಲತ್ರಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ಮಂತುರ್ಗಾ ಸೇತುವೆ ಜಲಾವೃತಗೊಂಡಿದ್ದು, ಹೆಮ್ಮಡಗಾ ಖಾನಾಪುರ ಸಂಪರ್ಕ ಕಡಿತಗೊಂಡಿದೆ.
ಕೊಡಗಿನಲ್ಲಿ ರಣಭೀಕರ ಮಳೆಯಾಗುತ್ತಿದ್ದು, ಮಡಿಕೇರಿ ತಾಲೂಕಿನ ಮಡಿಕೇರಿ-ವಿರಾಜಪೇಟೆ ರಾಜ್ಯ ಹೆದ್ದಾರಿಯಲ್ಲಿ ಪ್ರವಾಹ ಉಂಟಾಗಿದೆ. ರಸ್ತೆ ಬದಿಯ ಒಂದು ಅಂಗಡಿ ಮುಳುಗಡೆಯಾಗಿದ್ದು, ಅಂಗಡಿ ವಾಸಿಗಳನ್ನ ಸ್ಥಳಾಂತರಿಸಲಾಗಿದೆ.
ಮೈಸೂರು ಜಿಲ್ಲೆ ಕಬಿನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ. ಇದ್ರರಿಂದಾಗಿ ನಂಜನಗೂಡಿನಲ್ಲಿ ಮತ್ತಷ್ಟು ಪ್ರವಾಹ ಭೀತಿ ಎದುರಾಗಿದೆ.

