ಮಂಗಳೂರು: ಬಹುನಿರೀಕ್ಷಿತ ಯಶವಂತಪುರ – ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪೂರ್ಣ ಮಾರ್ಗದ ಪರೀಕ್ಷಾರ್ಥ 16 ಬೋಗಿಗಳ ರೈಲು ಯಶವಂತಪುರದಿಂದ ಬೆಳಗ್ಗೆ 6.30ಕ್ಕೆ ಹೊರಟು ಸಂಜೆ 4.30ರ ಸುಮಾರಿಗೆ ಮಂಗಳೂರು ಸೆಂಟ್ರಲ್ ತಲುಪಿತು. ನಿಗದಿತ ವೇಳಾಪಟ್ಟಿಯಂತೆ ಮಧ್ಯಾಹ್ನ 2.25ಕ್ಕೆ ತಲುಪಬೇಕಿದ್ದ ಈ ರೈಲು ಸುಮಾರು ಎರಡು ಗಂಟೆ ತಡವಾಗಿ ಆಗಮಿಸಿತು.

ಸಕಲೇಶಪುರ – ಸುಬ್ರಹ್ಮಣ್ಯ ರೋಡ್ ನಡುವಿನ ಘಾಟ್ ವಿಭಾಗದಲ್ಲಿ ರೈಲಿನ ವೇಗ, ಸಂಚಾರ ಸಮಯ ಹಾಗೂ ಕಾರ್ಯಾಚರಣೆಯ ವಿವಿಧ ಅಂಶಗಳನ್ನು ಪರಿಶೀಲಿಸಲಾಯಿತು. ಈ ಭಾಗದಲ್ಲಿನ ತಿರುವು, ಇಳಿಜಾರು ಮತ್ತು ಭೌಗೋಳಿಕ ಸವಾಲುಗಳಿಂದಾಗಿ ರೈಲಿನ ಸಂಚಾರಕ್ಕೆ ಹೆಚ್ಚಿನ ಸಮಯ ಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಗ ಬೆಂಗಳೂರು ಮಂಗಳೂರು ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡ ಬಳಿಕ ಈ ಮಾರ್ಗದಲ್ಲಿ ವಿದ್ಯುತ್ ಚಾಲಿತವಾಗಿ ಸಂಚರಿಸಿದ ಪ್ರಮುಖ ಪರೀಕ್ಷಾರ್ಥ ರೈಲು ಇದಾಗಿದೆ. ಕಾರ್ಯಾಚರಣೆ, ವಿದ್ಯುತ್ ವಿತರಣೆ, ಎಂಜಿನಿಯರಿಂಗ್, ಮೆಕ್ಯಾನಿಕಲ್ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಪರೀಕ್ಷಾರ್ಧ ಸಂಚಾರದ ವೇಳೆ ಪರಿಶೀಲನೆ ನಡೆಸಿದರು.

ಸಕಲೇಶಪುರ – ಸುಬ್ರಹ್ಮಣ್ಯ ರೋಡ್ ಘಾಟ್ ವಿಭಾಗದಲ್ಲಿ ಸುರಕ್ಷಿತ ಸಂಚಾರಕ್ಕಾಗಿ ವಂದೇ ಭಾರತ್ ರೇಕ್‌ನಲ್ಲಿ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್‌ (AEB) ವ್ಯವಸ್ಥೆಯನ್ನು ಬಳಸಲಾಗಿದೆ. ಈ ವ್ಯವಸ್ಥೆ ಘಾಟ್‌ನ ಇಳಿಜಾರು ಪ್ರದೇಶದಲ್ಲಿ ರೈಲಿನ ವೇಗ ನಿಯಂತ್ರಣಕ್ಕೆ ನೆರವಾಗಲಿದೆ.

ಈ ಪರೀಕ್ಷಾರ್ಥ ಸಂಚಾರದಲ್ಲಿ ದಾಖಲಾದ ಪ್ರಯಾಣದ ಸಮಯ, ವೇಗ ಮತ್ತು ಕಾರ್ಯಾಚರಣೆಯ ಮಾಹಿತಿಯ ಆಧಾರದ ಮೇಲೆ ರೈಲ್ವೆ ಅಧಿಕಾರಿಗಳು ವರದಿ ಸಿದ್ಧಪಡಿಸಲಿದ್ದು, ಮುಂದಿನ ಹಂತದಲ್ಲಿ ವಾಣಿಜ್ಯ ಸಂಚಾರದ ವೇಳಾಪಟ್ಟಿಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ.