ದೇರಳಕಟ್ಟೆ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ 12 ವರ್ಷ ವಯಸ್ಸಿನ ಬಾಲಕಿಯೊಬ್ಬಳಿಗೆ ಮೂತ್ರಪಿಂಡದ ಕಾಯಿಲೆಗೆ ಚಿಕಿತ್ಸೆಯನ್ನು ನೀಡುತ್ತಿದ್ದಾಗ ಕಂಡು ಬಂದ ಬರ್ಕಿಟ್ಸ್ ಲಿಂಫೋಮಾ ಕ್ಯಾನ್ಸರ್ ಕಾಯಿಲೆಗೆ ಮುಕ್ತಿಯನ್ನು ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರ ತಂಡ ನೀಡಿದೆ. ಈಕೆಗೆ ಹುಟ್ಟಿನಿಂದಲೇ ಸಣ್ಣ ಮತ್ತು ಅಪೂರ್ಣವಾಗಿ ಬೆಳೆದಿರುವಂತಹ ಮೂತ್ರಪಿಂಡದಿಂದಲೇ ಕಿಡ್ನಿ ವೈಪಲ್ಯವಾಗಿದೆಯೆಂದು ಪತ್ತೆ ಹಚ್ಚಿ ಔಷಧಿ ಚಿಕಿತ್ಸೆಯೊಂದಿಗೆ ಆಕೆಗೆ ಡಯಾಲಿಸಿಸ್ ಅಗತ್ಯವೆಂದು ಪರಿಗಣಿಸಲಾಯಿತು.
ಒಂದು ತಿಂಗಳ ನಂತರ ಅನಿರೀಕ್ಷಿತವಾಗಿ ಬಾಲಕಿಯ ಮುಖ, ತಲೆ ಭಾಗದಲ್ಲಿ ಊತವು ಕಂಡು ಬಂದು ಕತ್ತಿನ ಸುತ್ತಲೂ ವಿಚಿತ್ರ ಗಂಟುಗಳು ಕಾಣಿಸಿದಾಗ ವೈದ್ಯರ ನಿಗಾವಣೆಯಲ್ಲಿ ಸಂಬಂಧಿಸಿದ ಚಿಕಿತ್ಸೆಗಳನ್ನು ಮತ್ತು ಅಗತ್ಯವಿರುವ ರಕ್ತದ ಮತ್ತು ರೇಡಿಯೋಲಾಜಿ ತಪಾಸಣೆಗಳನ್ನು ನಡೆಸಿದಾಗ ಅವಳ ರಕ್ತದಲ್ಲಿ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಪ್ರಮಾಣವಿತ್ತೆಂದು ಗಮನಿಸಿ ವೈದ್ಯರು ಇದನ್ನು ನಿಯಂತ್ರಿಸಲು ಆಧುನಿಕ ಔಷಧಿಯನ್ನು ನೀಡಲಾಯಿತು. ಆದರೆ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮಟ್ಟ, ಊತಗಳ ಕಾರಣ ತಿಳಿಯಲು ಹಾಗೂ ದೇಹದಾದ್ಯಂತ ಪಸರಿಸಿರುವುದು ಕಂಡು ಬಂದಿರುವುದರಿಂದ PET ಮತ್ತು CT ಸ್ಕಾನಿಂಗ್ ಮಾಡಿಸಲಾಯಿತು.
PET ಮತ್ತು CT ಸ್ಕಾನಿಂಗ್ ವರದಿಯಲ್ಲಿ ಬಾಲಕಿಗೆ ಬರ್ಕಿಟ್ಸ್ ಲಿಂಫೋಮಾ ಎಂಬ ಕ್ಯಾನ್ಸರ್ ಇರುವುದು ಪತ್ತೆ ಹಚ್ಚಲಾಯಿತು. ಇದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು ದುಗ್ದರಸ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಆಕ್ರಮಣಕಾರಿ ರೀತಿಯ ಕ್ಯಾನ್ಸರ್ ಆಗಿರುವುದರಿಂದ ವಿಶೇಷವಾಗಿ ಮೂತ್ರಪಿಂಡದ ಕಾಯಿಲೆಯಿಂದ ಈಗಾಗಲೇ ದುರ್ಬಲಗೊಂಡಿರುವ ಬಾಲಕಿಯ ದೇಹವು ಸಹಿಸಿಕೊಳ್ಳುವುದು ಕಷ್ಟಕರವಾಗಿತ್ತು.
ಭಾದಿತ ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವಾಗ ಬಾಲಕಿಯ ದುರ್ಬಲ ಮೂತ್ರಪಿಂಡದ ಕಾರ್ಯವನ್ನು ಸಮತೋಲಿತವಾಗಿ ನಿಯಂತ್ರಿಸಲು ವೈದ್ಯರು ಔಷಧದ ಪ್ರಮಾಣಗಳನ್ನು ಎಚ್ಚರಿಕೆಯಿಂದ ಹೊಂದಿಸಿಕೊಳ್ಳುವುದು ಸವಾಲಿನ ಕೆಲಸವಾಗಿತ್ತು, ದುರ್ಬಲಗೊಂಡ ರೋಗ ನಿರೋಧಕ ವ್ಯವಸ್ಥೆಯಿಂದಾಗಿ ಗಂಭೀರವಾದ ಸೋಂಕುಗಳು ಮೆದುಳಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮುಂತಾದ ಆರೋಗ್ಯ ತೊಡಕುಗಳು ಇದ್ದಾಗಲೂ ಮೇಲ್ವಿಚಾರಣೆ ಮಾಡುವುದು ಮತ್ತು ಸಂಬಂಧಿಸಿದ ಅವಶ್ಯ ಚಿಕಿತ್ಸೆಗಳನ್ನು ನೀಡಿ ಬಾಲಕಿಯನ್ನು ಕ್ಯಾನ್ಸರ್ ಮುಕ್ತರನ್ನಾಗಿ ಮಾಡಲಾಯಿತು.
ಇಂದು ಮಗು ಇನ್ನು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಜೀವನ ಸಾಗಿಸುತ್ತಿದ್ದರೂ ಅವಳಿಗೆ ಇನ್ನು ಮುಂದೆ ಸೂಕ್ತ ಚಿಕಿತ್ಸೆಗಳನ್ನು ಹೊರತುಪಡಿಸಿ ಡಯಾಲಿಸಿಸ್ ಅಗತ್ಯವಿಲ್ಲವೆಂದು ಕಂಡುಬಂದಿದೆ. ಈ ಪ್ರಕರಣದಲ್ಲಿ ಮೂತ್ರಪಿಂಡ ತಜ್ಞರು, ಕ್ಯಾನ್ಸರ್ ತಜ್ರರು ಮತ್ತು ಮಕ್ಕಳ ತಜ್ಞರುಗಳ ಸುಮಾರು ತಿಂಗಳುಗಳ ಕಾಲ ಸಂಘಟಿತ ಪ್ರಯತ್ನದ ಫಲವಾಗಿ ಇಂತಹ ಸಂಕೀರ್ಣವಾದ ಚಿಕಿತ್ಸಾ ಕ್ರಮಗಳನ್ನು ಕೈಗೊಂಡಿರುವುದರಿಂದಾಗಿ ಎರಡು ವರ್ಷದ ಮೊದಲು ನಡೆದಾಡಲು, ತನ್ನ ದೈನಂದಿನ ಕೆಲಸ ಕಾರ್ಯಗಳನ್ನು ಸುಲಲಿತವಾಗಿ ಕೈಗೊಳ್ಳಲು ಕಷ್ಟಪಡುತ್ತಿದ್ದ,
ಜೀವನವೇ ಕಷ್ಟವೆಂದು ತಿಳಿದಿದ್ದ ಬಾಲಕಿ ಇಂದು ಕುಟುಂಬ ಸದಸ್ಯರೊಂದಿಗೆ ಅತ್ಯಂತ ಲವಲವಿಕೆಯಿಂದ ಓಡಾಡಿಕೊಂಡಿದ್ದು ಬಾಲಕಿಯ ಪೋಷಕರು ತಮ್ಮ ಮಗಳ ಜೀವನದ ಅತ್ಯಂತ ಕಠಿಣ ಸಮಯದಲ್ಲಿ ಆಕೆಯೊಂದಿಗೆ ನಿಂತು ಚಿಕಿತ್ಸೆ ನೀಡಿ ಬಾಲಕಿಗೆ ಮರುಜೀವನ ನೀಡಿದ ವೈದ್ಯರು ಹಾಗೂ ಸಂಪೂರ್ಣ ಸಹಕಾರ ನೀಡಿದ ಆಸ್ಪತ್ರೆಯ ಆಡಳಿತ ವರ್ಗಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ.
ಯೆನೆಪೋಯ ವಿಶ್ವವಿದ್ಯಾನಿಲಯ ಮತ್ತು ಆಸ್ಪತ್ರೆಯ ಆಡಳಿತ ವರ್ಗದ ಸಂಪೂರ್ಣ ಬೆಂಬಲದೊಂದಿಗೆ ಈ ಸಂಕೀರ್ಣ ಪ್ರಕರಣವನ್ನು ಹೆಮೆಟೋ ಆಂಕಾಲಜಿ ವಿಭಾಗದ ಡಾ. ರಾಜೇಶ್ ಕೃಷ್ಣ ಮತ್ತು ಅನುಷಾ ಹೆಗ್ಡೆ, ನೆಫ್ರೋಲಜಿ ವಿಭಾಗದ ಡಾ. ಸಂತೋಷ್ ಪೈ, ಡಾ. ಆದಿತ್ಯ ಕುಮಾರ್ ಮಿಶ್ರಾ, ಡಾ. ಪ್ರೀಮಾ ಡೆಸಾ, ಪಿಡಿಯಾಟ್ರಿಕ್ ವಿಭಾಗದ ಡಾ. ಸಹನಾ ಕೆ.ಎಸ್, ಡಾ. ಅರುಣ್ ವರ್ಗಿಸ್ ಮತ್ತು ಜುಮೈಲ್ ಖಾದರ್ ಸುಸೂತ್ರವಾಗಿ ನಿರ್ವಹಿಸಿದರು. ದೀರ್ಘಕಾಲಿಕ ಕಿಡ್ನಿ ಸಮಸ್ಯೆಯೊಂದಿಗೆ ಈ ಕ್ಯಾನ್ಸರ್ ಬಾದಿತ ಬಾಲಕಿಗೆ ಸಂಕೀರ್ಣವಾದ ಚಿಕಿತ್ಸೆಯನ್ನು ನೀಡಿ ತನ್ನ ಎಳೆ ವಯಸ್ಸಿನಲ್ಲಿಯೇ ಕ್ಯಾನ್ಸರ್ ಮುಕ್ತವಾಗಿ ಮಾಡಿರುವುದು ವೈದ್ಯಲೋಕದಲ್ಲಿ ಒಂದು ಮೈಲಿಗಲ್ಲು ಎನ್ನಬಹುದು.

