ಮಂಗಳೂರು: ಹೋಮಿಯೋಪತಿಯ ಸಂಸ್ಥಾಪಕ ಡಾ. ಸ್ಯಾಮ್ಯುಯೆಲ್ ಹಾನೆಮನ್ ಅವರ 271 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥವಾಗಿ, ವಿಶ್ವ ಹೋಮಿಯೋಪತಿ ದಿನ 2026 ಅನ್ನು 25.04.2026 ರಂದು ಮಂಗಳೂರಿನ ದೇರಳಕಟ್ಟೆಯಲ್ಲಿರುವ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಚರಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮವು ಬೆಳಿಗ್ಗೆ 9:30 ಕ್ಕೆ ಕಾಲೇಜು ಸಭಾಂಗಣದಲ್ಲಿ ಪ್ರಾರಂಭವಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್. ಆರ್. ತಿಮ್ಮಯ್ಯ ಭಾಗವಹಿಸಿದ್ದರು. ಗೌರವಾನ್ವಿತ ಗಣ್ಯ ಅತಿಥಿಯಾಗಿ 1985 ರ ಯುಜಿ ಬ್ಯಾಚ್ನ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿ ಡಾ. ಗ್ರೆಟ್ಟಾ ಲೋಬೊ ಮತ್ತು 2001 ರ ಯುಜಿ ಬ್ಯಾಚ್ನ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿ ಡಾ. ಜಾಯ್ ಕೆ. ಬ್ಯಾನರ್ಜಿ ಭಾಗವಹಿಸಿದ್ದರು.
ಕಾರ್ಯಕ್ರಮವು ರೆ. ಫಾದರ್ ಅಗಸ್ಟಸ್ ಮುಲ್ಲರ್ ಮತ್ತು ಡಾ. ಸ್ಯಾಮ್ಯುಯೆಲ್ ಹ್ಯಾನೆಮನ್ ಅವರ ಅಮೂಲ್ಯ ಕೊಡುಗೆಗಳ ಗೌರವ ಮತ್ತು ಸ್ಮರಣಾರ್ಥ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವುದರೊಂದಿಗೆ ಪ್ರಾರಂಭವಾಯಿತು. ನಂತರ ಆತಿಥಿಗಳ ಪರಿಚಯ ಕಾರ್ಯಕ್ರಮ ಮತ್ತು ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಮುಂದುವರಿಯಿತು. ಸಂಚಾಲಕಿಯಾದ ಡಾ. ಅನುಷಾ ಜಿ. ಸನಿಲ್ ಅವರು ಗಣ್ಯ ಅತಿಥಿಗಳನ್ನು ವೇದಿಕೆಗೆ ಗೌರವಪೂರ್ವಕವಾಗಿ ಬರಮಾಡಿಕೊಂಡರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ಇ. ಎಸ್. ಜೆ. ಪ್ರಭು ಕಿರಣ್ ರವರು ಸ್ವಾಗತ ಭಾಷಣದಲ್ಲಿ ಸಭಿಕರನ್ನು ಆತ್ಮೀಯವಾಗಿ ಸ್ವಾಗತಿಸಿ, ಹೋಮಿಯೋಪಥಿಯ ಮಹತ್ವ ಮತ್ತು ಅದರ ಜಾಗತಿಕ ಪ್ರಾಮುಖ್ಯತೆಯನ್ನು ವಿವರಿಸಿದರು. ನಂತರ ವೇದಿಕೆಯಲ್ಲಿ ಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಆಚರಣೆಯ ಭಾಗವಾಗಿ, ವಿಶ್ವ ಹೋಮಿಯೋಪತಿ ದಿನ 2026 ರ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಆಡಳಿತಾಧಿಕಾರಿ ರೆವರೆಂಡ್ ಫಾದರ್ ಡೊನಾಲ್ಡ್ ನಿಲೇಶ್ ಕ್ರಾಸ್ತಾ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು್ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮೆಟೀರಿಯಾ ಮೆಡಿಕಾ ವಿಭಾಗ ಆಯೋಜಿಸಿದ್ದ “ಕಲರ್ಸ್ ಆಫ್ ಮೆಟೀರಿಯಾ ಮೆಡಿಕಾ” ಸ್ಪರ್ಧೆಗೆ ಮತ್ತು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ ಆಯೋಜಿಸಿದ್ದ ಮಾದರಿ ತಯಾರಿಕೆ ಸ್ಪರ್ಧೆಗೂ ಬಹುಮಾನಗಳನ್ನು ವಿತರಿಸಲಾಯಿತು.
ನಂತರ ಆಡಳಿತಾಧಿಕಾರಿಯಾದ ರೆ. ಫಾ. ಡೊನಾಲ್ಡ್ ನಿಲೇಶ್ ಕ್ರಾಸ್ತ ತಮ್ಮ ಭಾಷಣದಲ್ಲಿ ಆಧುನಿಕ ಆರೋಗ್ಯ ಸೇವೆಯಲ್ಲಿ ಹೋಮಿಯೋಪಥಿಯ ಮಹತ್ವವನ್ನು ಉಲ್ಲೇಖಿಸಿದರು. ವಿದ್ಯಾರ್ಥಿಗಳನ್ನು ಶೈಕ್ಷಣಿಕ ಹಾಗೂ ಸಹಪಾಠ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದಕ್ಕಾಗಿ ಅಭಿನಂದಿಸಿದರು. ಜೊತೆಗೆ, ಹೋಮಿಯೋಪಥಿಯನ್ನು ಅರ್ಥಮಾಡಿಕೊಳ್ಳಲು, ಅನುಷ್ಠಾನಗೊಳಿಸಲು ಹಾಗೂ ಪ್ರಚಾರ ಮಾಡಲು ದೊರೆಯುವ ಪ್ರತಿಯೊಂದು ಅವಕಾಶವನ್ನು ಸದ್ವಿನಿಯೋಗ ಪಡಿಸಿಕೊಳ್ಳುವಂತೆ ಪ್ರೇರೇಪಿಸಿದರು. ರೋಗಿಗಳನ್ನು ಗುಣಪಡಿಸುವುದು ಮತ್ತು ಅವರಿಗೆ ಆರೈಕೆ ನೀಡುವುದು ಎಂಬ ಮಹತ್ವದ ಧ್ಯೇಯವನ್ನು ಕಾಪಾಡಿಕೊಳ್ಳುವಂತೆ ಅವರು ಒತ್ತಿಹೇಳಿದರು.
ಮುಖ್ಯ ಅತಿಥಿಯವರು ಸಭೆಯನ್ನು ಉದ್ದೇಶಿಸಿ ತಮ್ಮ ಬಾಷಣದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಅಮೂಲ್ಯವಾದ ಆಲೋಚನೆಗಳನ್ನು ಹಂಚಿಕೊಂಡು ಪ್ರೇರಣೆಯಾದರು. ಅವರು ವಿದ್ಯಾರ್ಥಿಗಳ ಪ್ರತಿಭೆಯನ್ನು ಕಂಡು ತುಂಬಾ ಆಕರ್ಷಿತರಾಗಿದ್ದಾಗಿ ಹೇಳಿ, ವಿವಿಧ ಸ್ಪರ್ಧೆಗಳಲ್ಲಿ ಅವರು ತೋರಿದ ಸಕ್ರಿಯ ಭಾಗವಹಿಸುವಿಕೆ ಹಾಗೂ ಅನೇಕ ಬಹುಮಾನಗಳನ್ನು ಗೆದ್ದ ಸಾಧನೆಯನ್ನು ಪ್ರಶಂಸಿಸಿದರು ಹಾಗೂ ಪ್ರತಿಯೊಂದು ವೈದ್ಯಕೀಯ ಪದ್ಧತಿಗೂ ತನ್ನದೇ ಆದ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳಿವೆ, ಯಾವುದೂ ಮತ್ತೊಂದಕ್ಕಿಂತ ಶ್ರೇಷ್ಠವಲ್ಲ ಎಂಬುದನ್ನು ಹೇಳಿದರು. ವೈದ್ಯರು ಒಂದು ಪದ್ಧತಿಗೆ ಬದ್ಧರಾಗಿ ಅದನ್ನು ನಿಷ್ಠೆಯಿಂದ ಅಭ್ಯಾಸ ಮಾಡುವ ಮೂಲಕ ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ಪ್ರೇರೇಪಿಸಿದರು.
ಪ್ರತಿಷ್ಠಿತ “ಡಾ. ಮುಖೇಶ್ ಬಾತ್ರಾ ಹೋಮಿಯೋಪಥಿ ವಿದ್ಯಾರ್ಥಿವೇತನ” ಪ್ರಶಸ್ತಿಗಳನ್ನು “ಡಾ. ಮುಖೇಶ್ ಬಾತ್ರಾಸ್ ಹೋಮಿಯೋಪತಿ ವಿದ್ಯಾರ್ಥಿವೇತನ” ವತಿಯಿಂದ ನಿರ್ದೇಶಕರಾದ ರೆ. ಫಾ. ಫಾಸ್ಟಿನ್ ಲೂಕಾಸ್ ಲೋಬೋ ಅವರು “ಡಾ. ಮುಖೇಶ್ ಬಾತ್ರಾಸ್ ಹೋಮಿಯೋಪತಿ ವಿದ್ಯಾರ್ಥಿವೇತನ” ಪ್ರದಾನ ಮಾಡಿ, ಗೌರವಿಸಿದರು.
- ಚಿನ್ನದ ವಿದ್ಯಾರ್ಥಿವೇತನ: ಶ್ರೀಕನ್ಯಾ ಕೆ.ಎಚ್.
- ಬೆಳ್ಳಿ ವಿದ್ಯಾರ್ಥಿವೇತನ: ಅಖಿಲ್ ಮಾಂತೆರೊ
- ಕಂಚಿನ ವಿದ್ಯಾರ್ಥಿವೇತನ: ಸಿ.ಎಸ್. ಜೋಲೀನ್
ಮುಖ್ಯ ಅತಿಥಿ ಹಾಗೂ ಗೌರವಾನ್ವಿತ ಅತಿಥಿಗಳಿಗೆ ಸಂಸ್ಥೆಯ ನಿರ್ದೇಶಕರು ಸ್ಮರಣಿಕೆಯನ್ನು ಪ್ರದಾನ ಮಾಡಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ರೆ. ಫಾ. ಫಾಸ್ಟಿನ್ ಲೂಕಾಸ್ ಲೋಬೋ ಅಧ್ಯಕ್ಷೀಯ ಭಾಷಣದಲ್ಲಿ ಹೋಮಿಯೋಪಥಿಯ ಮಹತ್ವವನ್ನು ತಿಳಿಸಿ, ವಿದ್ಯಾರ್ಥಿಗಳು ಅದರ ಮೌಲ್ಯಗಳನ್ನು ಪಾಲಿಸಿ “ಪ್ರೊಫೆಸ್, ಪ್ರಾಕ್ಟಿಸ್ ಅಂಡ್ ಪ್ರೋಕ್ಲೇಮ್” ತತ್ವದಂತೆ ನಿಷ್ಠೆಯಿಂದ ಮತ್ತು ನೈತಿಕವಾಗಿ ಸೇವೆ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮವು ಸಂಚಾಲಕಿಯಾದ ಡಾ. ಅನುಷಾ ಜಿ. ಸನಿಲ್ ಅವರ ಹೃತ್ಪೂರ್ವಕ ಕೃತಜ್ಞತಾ ವಂದನೆಯೊಂದಿಗೆ ಸಮಾಪ್ತಿಗೊಂಡಿತು. ಅವರು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಮುಖ್ಯ ಅತಿಥಿಗಳು, ಗಣ್ಯರು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಹಕಾರಿಸಿದ ಎಲ್ಲರಿಗೂ ತಮ್ಮ ಧನ್ಯವಾದಗಳನ್ನು ಅರ್ಪಿಸಿದರು. ನಂತರ ಸಂಸ್ಥೆಯ ಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.
ನಂತರ ಗೌರವಾನ್ವಿತ ಅತಿಥಿಗಳಾದ ಡಾ. ಗ್ರೆಟ್ಟಾ ಲೋಬೋ ಮತ್ತು ಡಾ. ಜಾಯ್ ಕೆ. ಬ್ಯಾನರ್ಜಿ ಅವರೊಂದಿಗೆ ಸಂವಾದಾತ್ಮಕ ಅಧಿವೇಶನಗಳನ್ನು ಆಯೋಜಿಸಲಾಯಿತು. ಈ ಅಧಿವೇಶನಗಳ ಮೂಲಕ ವಿದ್ಯಾರ್ಥಿಗಳಿಗೆ ಅವರ ವೃತ್ತಿಪರ ಅನುಭವಗಳಿಂದ ಮಹತ್ವದ ತಿಳುವಳಿಕೆಯನ್ನು ಪಡೆಯುವ ಅವಕಾಶ ದೊರಕಿತು. ಕಾರ್ಯಕ್ರಮವನ್ನು ಡಾ. ದೀಕ್ಷಾ ಪಾರ್ವತಿ ಮತ್ತು ಕುಮಾರಿ ಪೂಜಾ ರವರು ನಿರೂಪಿಸಿದರು. ಅರ್ಥಪೂರ್ಣ ಮತ್ತು ಸಮೃದ್ಧಿದಾಯಕವಾದ ವಿಶ್ವ ಹೋಮಿಯೋಪಥಿ ದಿನ 2026ರ ಕಾರ್ಯಕ್ರಮವು ರುಚಿಕರವಾದ ಭೋಜನದೊಂದಿಗೆ ಸಮಾಪ್ತಿಗೊಂಡಿತು.

