ಪುತ್ತೂರು: ‘ನನ್ನ ಮಗಳಿಗೆ ಪ್ರಪೋಸ್ ಮಾಡಿ ಮದುವೆಯಾಗುವುದಾಗಿ ನಂಬಿಸಿದ ಯುವಕ ಮಗಳು ಗರ್ಭವತಿಯಾದಾಗ ನಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ಇದೀಗ ಆಕೆ ಮಗುವಿಗೆ ಜನ್ಮವೆತ್ತಿದ್ದಾಳೆ. ಹಿಂದೂ ಸಂಘಟನೆಯ ಮುಖಂಡರಿಂದಲೂ, ಶಾಸಕರಿಂದಲೂ, ಪೊಲೀಸರಿಂದಲೂ ನ್ಯಾಯ ಸಿಗಲಿಲ್ಲ. ನಮಗೆ ಎಲ್ಲಿ ನೋಡಿದರೂ ನ್ಯಾಯ ಸಿಗುತ್ತಿಲ್ಲ. ನಮಗೆ ನ್ಯಾಯ ಸಿಗದಿದ್ದರೆ ನಾವು ಬಿಡುವುದಿಲ್ಲ. ಎಲ್ಲಿಯೂ ಪ್ರತಿಭಟನೆಗೂ ಸಿದ್ಧ ಎಂದು ಸಂತ್ರಸ್ತೆ ಯುವತಿಯ ತಾಯಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪಿ.ಜಿ.ಜಗನ್ನಿವಾಸ ರಾವ್ ಅವರ ಪುತ್ರ ಶ್ರೀಕೃಷ್ಣ ಜೆ.ರಾವ್‌ಗೆ ನನ್ನ ಮಗಳೊಂದಿಗೆ ಲವ್ ಇತ್ತು. ಆಕೆ 8 ರಿಂದ 10ನೇ ತರಗತಿಯ ತನಕ ರಾಮಕೃಷ್ಣ ಶಾಲೆಗೆ ಹೋಗಿದ್ದಳು. ಅಲ್ಲಿಂದ ನಂತರ ಮಂಗಳೂರಿನಲ್ಲಿ ಸಯನ್ಸ್ ವಿದ್ಯಾರ್ಥಿನಿಯಾಗಿ, ವಿದ್ಯಾರ್ಜನೆ ಪೂರ್ಣಗೊಳಿಸಿದ್ದಾಳೆ. ಈ ನಡುವೆ ಆಕೆ ಗರ್ಭಿಣಿಯಾಗಿರುವ ವಿಚಾರವನ್ನು ಶ್ರೀಕೃಷ್ಣನೇ ನನ್ನ ಬಳಿ ಬಂದು ಆಂಟಿ ನಮ್ಮಿಂದ ತಪ್ಪಾಗಿದೆ ಎಂದು ಹೇಳಿ ವಿಷಯ ತಿಳಿಸಿದ್ದ.

ಈ ವಿಚಾರವನ್ನು ಅವನ ತಂದೆಗೂ ತಿಳಿಸಿದ್ದೆ. ಆಗ ಅವರೇ ಹಾಗಾದರೆ ಮದುವೆ ಮಾಡಿಸಿ ಬಿಡುವ ಎಂದು ತಿಳಿಸಿದ್ದರು. ಹಾಗೆ ಗರ್ಭಿಣಿಯ ಪರೀಕ್ಷೆಗೆಂದು ಪಿ.ಜಿ.ಜಗನ್ನಿವಾಸ ರಾವ್, ಅವರ ಪತ್ನಿ ಹಾಗು ನಾನು ಮತ್ತು ಮಗಳು ಜೊತೆಯಲ್ಲೇ ಅಥೇನಾ ಆಸ್ಪತ್ರೆಗೆ ಹೋದಾಗ ಮಗುವನ್ನು ತೆಗೆಸುವಂತೆ ಪರೀಕ್ಷೆ ಮಾಡಿದಾಗ ಆಕೆಗೆ 7 ತಿಂಗಳಾಗಿರುವುದರಿಂದ ಕಷ್ಟ ಸಾಧ್ಯ ಎಂದಿದ್ದರು. ಮತ್ತೆ 2ನೇ ಸಲಹೆ ಪಡೆಯಲು ಶ್ರೀಕೃಷ್ಣನ ತಂದೆ ತಾಯಿ ಹಾಗು ನಾನು ನನ್ನ ಗಂಡ, ನನ್ನ ತಂಗಿ ಗಂಡ ಜೊತೆಯಾಗಿ ದೇರಳಕಟ್ಟೆ ಆಸ್ಪತ್ರೆಗೆ ಹೋದಾಗ ಸ್ಕ್ಯಾನಿಂಗ್ ಮಾಡಿದಾಗ ಏಳುವರೆ ತಿಂಗಳು ಆಗಿದೆ.

ಇದು ಸಾಧ್ಯವಿಲ್ಲ ಎಂದಿದ್ದರು. ಈ ನಡುವೆ ಶ್ರೀಕೃಷ್ಣನ ತಾಯಿ ನಮ್ಮಲ್ಲಿ ನನ್ನ ಮಗನೊಂದಿಗೆ ಮದುವೆಗೆ ಕನಸಿನಲ್ಲೂ ಗ್ರಹಿಸಬೇಡಿ ಎಂದಿದರಲ್ಲದೆ ಬಂಟ್ವಾಳದ ಡಾಕ್ಟರ್‌ನ ಪರಿಚಯವಿದೆ. ಅವರು ಎಲ್ಲಾ ವ್ಯವಸ್ಥೆ ಮಾಡುತ್ತಾರೆ ಎಂದಾಗ ನನ್ನ ಮಗಳಿಗೆ ತೊಂದರೆ ಆಗುವ ಲಕ್ಷಣ ಕಂಡು ನಾನು ಹಿಂಜರಿದೆ. ಆಗ ಅವರ ಪುತ್ರ ನನಗೆ ಕರೆ ಮಾಡಿ ಆಂಟಿ ನಾನು ಆತ್ಮಹತ್ಯೆ ಮಾಡುತ್ತೇನೆ ಎಂದು ಹೇಳಿದ. ಅದಕ್ಕೆ ನಾನು ಫೋನ್ ಕಟ್ ಮಾಡಿದೆ. ಈ ಕುರಿತು ನಾನು ಪೊಲೀಸರಿಗೆ ದೂರು ನೀಡಲು ಮುಂದಾದಾಗ ನನ್ನ ಗಂಡ ಮತ್ತು ಪಿ.ಜಿ.ಜಗನ್ನಿವಾಸ ರಾವ್ ಅವರು ಒಂದೇ ಕ್ಲಾಸ್‌ಮೆಟ್ ಆಗಿದ್ದರಿಂದ ನನ್ನ ಗಂಡ ದೂರು ಕೊಡುವುದು ಬೇಡ.

ಯಾರಿಗೂ ಗೊತ್ತಾಗುವುದು ಬೇಡ. ಅವರು ನನಗೆ ಪರಿಚಯ ಇದೆ. ಅವರು ಮದುವೆ ಮಾಡಿಕೊಟ್ಟಾರೂ ಎಂದಿದ್ದರು. ಆದರೆ ಪಿ.ಜಿ.ಜಗನ್ನಿವಾಸ ರಾವ್ ಅವರ ನಡವಳಿಕೆ ಸಂಶಯವಿದ್ದರಿಂದ ನಾನು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದೆ. ಆ ಸಂದರ್ಭಹುಡುಗನನ್ನು ಪೊಲೀಸರು ಕರೆಸಿದ್ದರು. ಆಗ ಮತ್ತೆ ಮದುವೆಯ ರಾಜಿ ಪಂಚಾತಿಕೆಗೆ ಶಾಸಕರ ಪ್ರವೇಶವಾಯಿತು ಎಂದು ಆರೋಪಿಸಿದರು.

ನಾನು ಜೂ.22ಕ್ಕೆ ಮಹಿಳಾ ಪೊಲೀಸ್ ಸ್ಟೇಷನ್‌ನಲ್ಲಿ ದೂರು ನೀಡಲು ಹೋದಾಗ ಪಿ.ಜಿ.ಜಗನ್ನಿವಾಸ ರಾವ್ ಅವರು ಠಾಣೆಗೆ ಬಂದು ನನ್ನ ಮಗನಿಗೆ 21 ವರ್ಷ ಆದ ತಕ್ಷಣ ರಿಜಿಸ್ಟರ್ ಮದುವೆ ಮಾಡಿಸುತ್ತೇನೆ ಎಂದು ಹೇಳಿ ಬಳಿಕ ಶಾಸಕರಿಗೆ ಕರೆ ಮಾಡಿದ್ದರು. ಶಾಸಕರ ಕರೆಯನ್ನು ನನಗೆ ಕೊಟ್ಟು ಶಾಸಕರೊಂದಿಗೆ ಮಾತನಾಡಲು ತಿಳಿಸಿದರು.

ಶಾಸಕರು ಪೋನ್‌ನಲ್ಲಿ ನನ್ನಲ್ಲಿ ಮಾತನಾಡಿ ಎಫ್‌ಐಆ‌ರ್ ಈಗ ಮಾಡಬೇಡಿ. ಜೂ.23ಕ್ಕೆ ಆವನಿಗೆ 21 ವರ್ಷ ಆದ ಬಳಿಕ ಅವರು ಮದುವೆ ಒಪ್ಪಿದಾರಲ್ಲ ಎಂದರು. ಹಾಗೆ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿ ಇತ್ಯರ್ಥ ಆಗಿತ್ತು. ಆದರೆ ಹುಡುಗನಿಗೆ 21 ವರ್ಷ ಆದ ಬಳಿಕ ಅವರು ಮದುವೆ ಒಪ್ಪದಿರುವುದನ್ನು ಶಾಸಕರಿಗೆ ಕರೆ ಮಾಡಿ ತಿಳಿಸಿದೆ. ಅದಕ್ಕೆ ಅವರು ಮದುವೆಗೆ ಒಪ್ಪದಿದ್ದರೆ ನಿಮಗೆ ಹೇಗೆ ಬೇಕೋ ಹಾಗೆ ಕೇಸ್ ಮುಂದುವರಿಸಿ ಎಂದು ಹೇಳಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಹೇಳಿದರು.

ಹುಡುಗನಿಗೆ 21 ವರ್ಷ ಆದ ಬಳಿಕ ನಮ್ಮ ಮನೆಯಲ್ಲೇ ಶ್ರೀಕೃಷ್ಣ, ಅವನ ತಂದೆ ಪಿ.ಜಿ.ಜಗನ್ನಿವಾಸ ರಾವ್, ಅವರ ಅಣ್ಣ ಮತ್ತು ಲಕ್ಷ್ಮೀ ಬೆಟ್ಟದ ಅಣ್ಣತಮ್ಮಂದಿರು ಬಂದು ಮಾತುಕತೆ ನಡೆಸಿದರು. ಅವರು ನಮಗೆ ಹಲವು ರೀತಿಯಲ್ಲಿ ಮಗಳ ಮೇಲೆಯೇ ಸಂಶಯದ ರೀತಿಯಲ್ಲಿ ಪ್ರಶ್ನೆ ಮಾಡಿದರು. ಮಗು ನನ್ನದಲ್ಲ ಎಂದು ಹುಡುಗನೇ ಹೇಳಿ ಆಕೆಗೆ ಹಲ್ಲೆಗೂ ಯತ್ನಿಸಿದ. ಮಾತುಕತೆಗೆ ಬಂದವರು ಮನೆ ಬಿಟ್ಟು ಹೋಗುವಂತೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಹೇಳಿದರು.

ಹಿಂದೂ ಆಗಿ ನಮ್ಮಲ್ಲೇ ಅನ್ಯಾಯ ಆದಾಗ ನನ್ನ ಮಗಳಿಗೆ ನ್ಯಾಯಕ್ಕಾಗಿ ಹಿಂದು ಸಂಘಟನೆಯ ಮುಖಂಡರಲ್ಲೂ ಮನವಿ ಮಾಡಿದ್ದೇವೆ. ಬಜರಂಗದಳದ ಮುರಳಿಕೃಷ್ಣ ಹಸಂತಡ್ಕ ಅವರಲ್ಲಿ ಮಾತನಾಡಿದಾಗ ಅವರು ಹುಡುಗ ಒಪ್ಪುತ್ತಿಲ್ಲ ಎಂದು ಹೇಳಿದರಲ್ಲೆ 10ಲಕ್ಷ ಕೊಟ್ಟರೆ ಆಗಬಹುದಾ ಎಂದು ಕೇಳಿದ್ದಾರೆ. ನಾನು 10 ಲಕ್ಷವಲ್ಲ 1 ಕೋಟಿ ಕೊಟ್ಟರು ನಾನು ನ್ಯಾಯ ಸಿಗದೆ ಬಿಡುವುದಿಲ್ಲ ಎಂದು ಹೇಳಿದ್ದೆ. ಮಂಗಳೂರಿನಲ್ಲೂ ಶರಣ್‌ ಪಂಪ್‌ವೆಲ್‌ ಅವರಲ್ಲಿ ಪೋನ್‌ನಲ್ಲಿ ಕರೆ ಮಾಡಿ ಮನವಿ ಮಾಡಿದ್ದೆವು. ಅವರು ಮಗುವನ್ನು ಡೊನೆಟ್ ಮಾಡಬಹುದಾ ಎಂದು ಕೇಳಿದ್ದರು. ಅರುಣ್ ಕುಮಾರ್ ಪುತ್ತಿಲರಲ್ಲೂ ಮಾತನಾಡಿದಾಗ ಇದರಲ್ಲಿ ನಾನು ಬಂದ್ರೆ ತಪ್ಪಾಗುತ್ತದೆ ಎಂದು ಹೇಳಿ ಕೈಚೆಲ್ಲಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ.

ನನ್ನ ಮಗಳನ್ನು ಮದುವೆ ಆಗಲು ಒಪ್ಪದ ಶ್ರೀಕೃಷ್ಣನ ವಿರುದ್ಧ ನಾವು ಜೂ.24ರಂದು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದೇವೆ. ಆದರೆ ಪೊಲೀಸರು ಅವರನ್ನು ವಿಚಾರಣೆ ಕರೆದಿಲ್ಲ. ಪೊಲೀಸರನ್ನು ಈ ಕುರಿತು ಪ್ರಶ್ನಿಸಿದರೆ ಶ್ರೀಕೃಷ್ಣ ನಾಪತ್ತೆಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಅವರ ತಂದೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ. ಶ್ರೀಕೃಷ್ಣ ಓಡಿ ಹೊದದಲ್ಲ ಮನೆಯವರೇ ಅವನನ್ನು ಮುಚ್ಚಿಟ್ಟಿದ್ದಾರೆ. ಪೊಲೀಸರು ಪ್ರಯತ್ನ ಪಟ್ಟರೆ ಆತನನ್ನು ಪತ್ತೆ ಮಾಡುವುದು ಕಷ್ಟವಿಲ್ಲ. ಈ ಕುರಿತು ಎಸ್ಪಿಯವರಲ್ಲೂ ಹೋಗಿ ತಿಳಿಸಿದ್ದೇವೆ. ಅವರು ಯುವಕನ ಕ್ಯೂ ಸಿಕ್ಕಿದೆ ಎಂದು ಹೇಳುತ್ತಾರೆ ಹೊರತು ಇಲ್ಲಿನ ತನಕ ಪತ್ತೆ ಮಾಡಿಲ್ಲ ಎಂದು ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ.