ಮಂಗಳೂರು: ವಿಶ್ವಕರ್ಮ ಸಹಕಾರ ಬ್ಯಾಂಕ್ ಮೂಲಭೂತವಾಗಿ ಒಂದು ಆರ್ಥಿಕ ಸಂಸ್ಥೆ. ಆದರೆ ಆರ್ಥಿಕ ಕಾರ್ಯ ಚಟುವಟಿಕೆಗಳ  ಜೊತೆಗೆ ಸಮಾಜಮುಖಿಯಾಗಿಯೂ ಕಾರ್ಯ ತತ್ಪರವಾಗಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಸ್ವಚ್ಛತೆಯಂತಹ ಸಮಾಜದ ಮೂಲಭೂತ ಸಂಗತಿಗಳನ್ನು ಕೈಗೆತ್ತಿಕೊಂಡು ಸಾಮಾಜಿಕ ಜಾಗೃತಿಯ ಸ್ವಚ್ಛ ಭಾರತ್ ಕಾರ್ಯವನ್ನು ನಿರಂತರವಾಗಿ ಬ್ಯಾಂಕ್ ಮಾಡುತ್ತಿರುವುದು ಸ್ತುತ್ಯಾರ್ಹ ಸಂಗತಿಯಾಗಿದೆ ಎಂದು ರೊಟೇರಿಯನ್ ಪಿಡಿಜಿ ಡಾ. ದೇವದಾಸ್ ರೈ ಅವರು ಹೇಳಿದರು.

ಅವರು ವಿಶ್ವಕರ್ಮ ಸಹಕಾರ ಬ್ಯಾಂಕ್ “ಸ್ವಚ್ಛತಾ ಹೀ ಸೇವಾ” ಧ್ಯೇಯದೊಂದಿಗೆ ಆಯೋಜಿಸಿರುವ ಸ್ವಚ್ಛ ಭಾರತ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್ ಮಂಗಳೂರು ಕೇಂದ್ರ ಇದರ ಅಧ್ಯಕ್ಷರಾದ ಶ್ರೀ ಭಾಸ್ಕರ್ ರೈ ಕಟ್ಟಾ ಅವರು ಸ್ವಚ್ಛ ಭಾರತ್ ನಂತಹ ಸಾಮಾಜಿಕ ಕಾರ್ಯಗಳು ಜನರ ಪರಿಣಾಮಕಾರಿ ಭಾಗೀದಾರಿಕೆಯಿಂದ ಮಾತ್ರ ಯಶಸ್ವಿಯಾಗಲು ಸಾಧ್ಯ. ಆದುದರಿಂದ ವಿಶ್ವಕರ್ಮ ಬ್ಯಾಂಕ್ ಆಯೋಜಿಸಿರುವ ಈ ಸಾಮಾಜಿಕ ಕಾರ್ಯದಲ್ಲಿ ನಮ್ಮಂತಹ ಸಂಘಟನೆಗಳು ಕೈಜೋಡಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ವಿಶ್ವಕರ್ಮ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ, ರೋಟೇರಿಯನ್ ಡಾ. ದೇವದಾಸ್ ರೈ, ಅವೇಕ್ ಕುಡ್ಲಾ ಇದರ ಸಂಯೋಜಕರಾದ ಶ್ರೀ ಕಮಲಾಕ್ಷ ಪೈ, ರೋಟರಿ ಕ್ಲಬ್ ಮಂಗಳೂರು ಕೇಂದ್ರ ಇದರ ಅಧ್ಯಕ್ಷರಾದ ಭಾಸ್ಕರ್ ರೈ ಕಟ್ಟಾ ಇವರುಗಳು ಹಸಿರು ನಿಶಾನೆ ತೋರುವ ಮೂಲಕ ಸ್ವಚ್ಛ ಭಾರತ್ ಶ್ರಮದಾನವು ಪ್ರಾರಂಭವಾಯಿತು.  ಮಂಗಳೂರಿನ ರಥಬೀದಿ, ಕಾಳಿಕಾಂಬ ದೇವಸ್ಥಾನ ರಸ್ತೆ, ಮುಖ್ಯಪ್ರಾಣ ದೇವಸ್ಥಾನ ರಸ್ತೆ, ಫ್ಲೈವರ್ ಮಾರ್ಕೆಟ್, ಅಜೀಜುದ್ದೀನ್ ರಸ್ತೆ, ಬಸವನಗುಡಿ ರಸ್ತೆ, ನ್ಯೂಚಿತ್ರಾ ಟಾಕೀಸ್ ಪರಿಸರದಲ್ಲಿ ಸ್ವಯಂ ಸೇವಕರು ಸ್ವಚ್ಛತೆಯ ಕಾರ್ಯವನ್ನು ನಡೆಸಿದರು.

ಈ ಸಂದರ್ಭದಲ್ಲಿ ಶ್ರಮದಾನದಲ್ಲಿ ಭಾಗವಹಿಸಿದ ಚಿಂತಕ ಅರವಿಂದ ಚೊಕ್ಕಾಡಿಯವರು ಸ್ವಚ್ಛತೆ ಎನ್ನುವುದು ಮಹಾತ್ಮಾ ಗಾಂಧೀಜಿಯವರ ಕನಸಿನ ಭಾಗವಾದರೂ ಅದು ಪ್ರಕೃತಿದತ್ತವಾದುದಾಗಿದೆ. ಮಾನವ ಜೀವನದ ಸಂಪೂರ್ಣ ಜೈವಿಕ ಪರಿಸರದ ಶುಚಿತ್ವವನ್ನು ಕಾಪಾಡಬೇಕಾದದ್ದು ಎಷ್ಟು ಮುಖ್ಯವೋ, ನಮ್ಮ ಗುಣ, ನಡತೆ, ವ್ಯವಹಾರದಲ್ಲಿಯೂ ಶುಚಿತ್ವವನ್ನು ಕಾಪಾಡುವುದು ಕೂಡಾ ಅಷ್ಟೇ ಮುಖ್ಯ ಎಂದು ಕರೆ ನೀಡಿದರು.

ಬ್ಯಾಂಕಿನ ನಿರ್ದೇಶಕರಾದ ಶ್ರೀ ಹರಿಪ್ರಸಾದ್, ಕೆನರಾ ಕಾಲೇಜು ರಾಷ್ಟೀಯ ಸೇವಾ ಯೋಜನೆಯ ಘಟಕದ ಯೋಜನಾಧಿಕಾರಿಗಳಾದ ಸುಶಾಮಾ, ಸೀಮಾ ಸಿ ಹಾಗೂ ವಿದ್ಯಾರ್ಥಿಗಳು, ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸಕರಾದ ಪುಷ್ಪಲತಾ, ರೋಟರಿ ಕ್ಲಬ್ ಮಂಗಳೂರು ಕೇಂದ್ರದ  ರಾಜಗೋಪಾಲ್ ರೈ,  ಸಾಯಿ ಬಾಬಾ ಮತ್ತು ಸದಸ್ಯರು, ಅವೇಕ್ ಕುಡ್ಲದ  ಪುನೀತ್ ಮತ್ತು ಸಂಗಡಿಗರು, ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷರಾದ ಕೆ. ಎಲ್. ಹರೀಶ್,

ಉದಯ ಆಚಾರ್ಯ ಮತ್ತು ಸದಸ್ಯರು, ಕಾಳಿಕಾಂಬಾ ಸೇವಾ ಸಮಿತಿಯ ಜಗದೀಶ್ ಸಿದ್ದಕಟ್ಟೆ, ರವೀಂದ್ರ ಮಂಗಳಾದೇವಿ, ರವೀಂದ್ರ ಎಸ್. ಮತ್ತು ಸದಸ್ಯರು, ಗುರುಸೇವಾ ಪರಿಷತ್ತಿನ ಗಣೇಶ್ ಕೆಮ್ಮಣ್ಣು,  ಕೆ. ಜೆ. ಗುರುರಾಜ್,  ಶೇಖರ ಆಚಾರ್ಯ ಮತ್ತು ಸದಸ್ಯರು,  ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ವಸಂತ ಆಡ್ಯ್ಯಂತಾಯ ಮತ್ತು ಬ್ಯಾಂಕಿನ ಸಿಬ್ಬಂದಿಗಳು ಸ್ವಯಂ ಸೇವಕರಾಗಿ ಭಾಗವಹಿಸಿದರು. ಸ್ವಚ್ಛ ಭಾರತ್ ಶ್ರಮದಾನದ ಸಂಚಾಲಕರಾದ ಶ್ರೀ ಪ್ರಕಾಶ್ ಆಚಾರ್ಯ ಹಲೇಜಿ ಇವರು ಶ್ರಮದಾನದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.