ಮಂಗಳೂರು : ಧರ್ಮಸ್ಥಳದಲ್ಲಿ ನಡೆದ ಗಲಾಟೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹುಟ್ಟಿಸುವ ಮತ್ತು ಅಶ್ಲೀಲವಾಗಿ ಮಾತನಾಡಿದ ವಿಡಿಯೋ ವನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಪುನೀತ್ ಕೆರೆಹಳ್ಳಿ ವಿರುದ್ದ ಪ್ರಕರಣ ದಾಖಲಾಗಿದೆ.
‘ಅಪರಾಧ ಕೃತ್ಯಗಳನ್ನು ನಡೆಸಲು ಪ್ರೇರಣೆಯಾಗುವಂತಹ, ಅಶ್ಲೀಲ ಹಾಗೂ ಸಾರ್ವಜನಿಕರಿಗೆ ಕಿರಿ ಕಿರಿಯುಂಟಾಗುವಂತೆ ಆರೋಪಿ ಗಿರೀಶ್ ಮಟ್ಟಣ್ಣನವರ್ ಮಾತನಾಡಿರುವ ವಿಡಿಯೊವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಬುಧವಾರ (ಆ.6ರಂದು) ಪ್ರಸಾರಮಾಡಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ನಿವಾಸಿ ಚರಣ್ ಶೆಟ್ಟಿ (32) ದೂರು ನೀಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 57 (ಅಪರಾಧ ನಡೆಸಲು ಪ್ರೇರಣೆ), ಸೆಕ್ಷನ್ 296 (ಅಶ್ಲೀಲ ವಿಚಾರ ಪ್ರಸಾರ) ಹಾಗೂ ಸೆಕ್ಷನ್ 190ರ (ಅಕ್ರಮ ಕೂಟ ರಚನೆ) ಅಡಿ ಪ್ರಕರಣ ದಾಖಲಾಗಿದೆ.’
‘ಪ್ರಾದೇಶಿಕವಾಗಿ ಜನರ ನಡುವೆ ವೈಮನಸ್ಸು ಉಂಟಾಗುವಂತಹ ಹಾಗೂ ಸಾರ್ವಜನಿಕರಲ್ಲಿ ಅಪಾಯದ ಭೀತಿಯನ್ನು ಸೃಷ್ಟಿಸುವಂತಹ ಹೇಳಿಕೆಗಳನ್ನು ಆರೋಪಿ ಮಹೇಶ್ ತಿಮರೋಡಿ ಅವರು ಯೂಟ್ಯೂಬ್‌ನಲ್ಲಿ ಗುರುವಾರ (ಆ.7ರಂದು) ಪ್ರಸಾರ ಮಾಡಿದ್ದಾರೆ’ ಎಂದು ಆರೋಪಿಸಿ ಅವರು ಮತ್ತೊಂದು ದೂರು ನೀಡಿದ್ದಾರೆ. ಬಿಎನ್‌ಎಸ್ ಸೆಕ್ಷನ್ 353(2)ರ (ಧರ್ಮ, ಜಾತಿ ಜನಾಂಗ ಮೊದಲಾದುವುಗಳ ಆಧಾರದಲ್ಲಿ ಜನರ ನಡುವೆ ದ್ವೇಷ ಹುಟ್ಟಿಸುವ ಹೇಳಿಕೆ ನೀಡುವುದು) ಅಡಿ ಪ್ರಕರಣ ದಾಖಲಾಗಿದೆ.
“ಆರೋಪಿ ಪುನೀತ್ ಕೆರೆಹಳ್ಳಿ ಅಶ್ಲೀಲವಾಗಿ ಮಾತನಾಡಿರುವ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ಕಸಬಾ ಗ್ರಾಮದ ನಿವಾಸಿ ಜೆರೋಮ್ ಬರ್ಬೋಝಾ (37) ದೂರು ನೀಡಿದ್ದು, ಬಿಎನ್‌ಎಸ್ ಸೆಕ್ಷನ್ 296ರ ಅಡಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

