ಮಂಗಳೂರು: ಹೆದ್ದಾರಿ ಬದಿ ನಿಲ್ಲಿಸಿದ್ದ ಟ್ಯಾಂಕರ್ಗಳ ಡೀಸೆಲ್ ಟ್ಯಾಂಕ್ನಿಂದ ಡೀಸೆಲ್ ಕಳವು ಮಾಡಲು ಸಿದ್ಧತೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು, ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಪಿಕಪ್ ವಾಹನ ಸಹಿತ ಡೀಸೆಲ್ ಹಾಗೂ ಇತರ ಪರಿಕರಗಳನ್ನು ಸ್ವಾಧೀನಪಡಿಸಿಕೊಂಡ ಘಟನೆ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಅಲಂಪಾಡಿ ಕ್ರಾಸ್ ಬಳಿ ನಡೆದಿದೆ. ಓರ್ವ ಪರಾರಿಯಾಗಿದ್ದು ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದ ಕೆ.ಹೊನ್ನಲೆಗೆರೆ ಹೋಬಳಿಯ ಜೈಮುತ್ತಾ (23), ಮುತ್ತು (28) ಬಂಧಿತ ಆರೋಪಿಗಳು. ಹಾಗೂ ಮಹಾದೇವ ಟಿ.ಕೆ. (27) ಎಸ್ಕೆಪ್ ಆಗಿದ್ದು ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಹೊರಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಕೌಕ್ರಾಡಿ ಗ್ರಾಮದ ಅಲಂಪಾಡಿ ಕ್ರಾನ್ ಬಳಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ಬಳಿ ಬೊಲೆರೋ ಪಿಕಪ್ ವಾಹನ ಅನುಮಾನಾಸ್ಪದವಾಗಿ ನಿಂತಿರುವುದು ಗಮನಕ್ಕೆ ಬಂದಿದೆ. ವಾಹನದ ಸಮೀಪ ಮೂವರು ಮುಖ ಮುಚ್ಚಿಕೊಂಡು ನಿಂತಿರುವುದನ್ನು ಪೊಲೀಸರು ಗಮನಿಸಿದ್ದಾರೆ.
ಸಮವಸ್ತ್ರದಲ್ಲಿದ್ದ ಪೊಲೀಸರು ಆರೋಪಿಗಳ ಬಳಿಗೆ ತೆರಳುತ್ತಿದ್ದಂತೆ ಮೂವರು ಕತ್ತಲಿನಲ್ಲಿ ಓಡಿಹೋಗಲು ಯತ್ನಿಸಿದ್ದಾರೆ. ಈ ಪೈಕಿ ಇಬ್ಬರನ್ನು ಪೊಲೀಸರು ಹಿಡಿದು ವಿಚಾರಿಸಿದಾಗ, ಅವರ ಇರುವಿಕೆಯ ಬಗ್ಗೆ ಸಮರ್ಪಕವಾದ ಉತ್ತರ ನೀಡಿಲ್ಲ ಎನ್ನಲಾಗಿದೆ. ಬಳಿಕ ಪಿಕಪ್ ವಾಹನದಲ್ಲಿದ್ದ ಖಾಲಿ ಕ್ಯಾನ್ಗಳು ಹಾಗೂ ವಾಹನದ ಬಳಿ ಪತ್ತೆಯಾದ ಅರ್ಧದಷ್ಟು ತುಂಬಿ ದ್ದ ಡೀಸೆಲ್ ಕ್ಯಾನ್ ಕುರಿತು ವಿಚಾರಣೆ ನಡೆಸಿದಾಗ, ರಾತ್ರಿ ವೇಳೆ ಹೆದ್ದಾರಿ ಬದಿ ನಿಲ್ಲಿಸಲಾಗಿದ್ದ ವಾಹನಗಳ ಡೀಸೆಲ್ ಟ್ಯಾಂಕ್ಗಳಿಂದ ಡೀಸೆಲ್ ಕಳವು ಮಾಡುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಪಂಚರ ಸಮಕ್ಷಮ ಆರೋಪಿಗಳು ತೋರಿಸಿಕೊಟ್ಟ ಸ್ಥಳದಿಂದ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಸುಮಾರು 20 ಲೀಟರ್ ಡೀಸೆಲ್ ತುಂಬಿದ್ದ 35 ಲೀಟರ್ ಸಾಮರ್ಥ್ಯದ ಒಂದು ಕ್ಯಾನ್, ಸುಮಾರು 35 ಲೀಟರ್ ಸಾಮರ್ಥ್ಯದ 39 ಖಾಲಿ ಕ್ಯಾನ್ ಗಳು, ಡೀಸೆಲ್ ಕಳವು ಮಾಡಲು ಬಳಸಲಾಗಿದೆ ಎನ್ನಲಾದ ರಬ್ಬರ್ ಪೈಪ್ ಹಾಗೂ ಹಳೆಯ ಕೆಂಪು-ಹಳದಿ ಮಿಶ್ರಿತ ಬಣ್ಣದ ಟಾರ್ಪಲ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಲ್ಲದೆ, ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಬೊಲೆರೋ ಪಿಕಪ್ ವಾಹನವನ್ನು ಕೂಡ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಬೆಳಗಿನ ಜಾವ 3.40ರಿಂದ 4.30ರವರೆಗೆ ನಡೆದ ಮಹಜರು ಪ್ರಕ್ರಿಯೆಯಲ್ಲಿ ಮೇಲ್ಕಂಡ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ವಶಪಡಿಸಿಕೊಂಡ ಪಿಕಪ್ ವಾಹನದ ಅಂದಾಜು ಮೌಲ್ಯ ಸುಮಾರು 5 ಲಕ್ಷ ರೂ, ಡೀಸೆಲ್ನ ಅಂದಾಜು ಮೌಲ್ಯ ರೂ.2,000 ಹಾಗೂ ಕ್ಯಾನ್ ಗಳ ಅಂದಾಜು ಮೌಲ್ಯ ಸುಮಾರು ರೂ. 6,000 ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಹಾಗೂ ತನಿಖೆ ನಡೆಸಲಾಗುತ್ತಿದೆ.

