ಮಂಗಳೂರು : ದ್ವಿಚಕ್ರ ವಾಹನಗಳ ಪರೀಕ್ಷಾ ಟ್ರ್ಯಾಕ್ ಮುಡಿಪು ಫಜೀರ್‌ನಲ್ಲಿರುವ ವಾಹನ ಚಾಲನಾ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿರುವುದಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.  ಈ ಕೇಂದ್ರ 2022ರಲ್ಲಿ ಉದ್ಘಾಟನೆ ಆಗಿತ್ತು. ಒಂದು ತಿಂಗಳು ಟ್ರೈನಿಂಗ್ ಕೊಡಲಾಗುತ್ತದೆ. ಅಲ್ಲಿಗೆ ಪ್ರಾಯೋಗಿಕ ತರಬೇತಿಗೆ ಒಂದು ಲಾರಿ ಅಥವಾ ಲಾರಿಯನ್ನು ಒದಗಿಸಲಾಗುವುದು ಎಂದರು.

ಅಲ್ಲಿ 50 ಮಂದಿಗೆ ವಾಸ್ತವ್ಯಕ್ಕೆ 50 ಮಂದಿಗೆ ಹಾಸ್ಟೆಲ್ ಅವಕಾಶ ಇದೆ. ಆದರೆ ಅಲ್ಲಿ ಯಾರು ನಿಲ್ಲುವುದಿಲ್ಲ. ಎಲ್ಲರೂ ಅಲ್ಲಿಗೆ ಬಂದು ಹೋಗುತ್ತಾರೆ. ಆದರೆ ಮಂಗಳೂರಿನವರು ಮಾತ್ರವಲ್ಲ ಬೇರೆ ಜಿಲ್ಲೆಯವರು ಇಲ್ಲಿಗೆ ಬರಬಹುದು. ಕೌಶಲ್ಯ ನಿಗಮದ ನೆರವು ಪಡೆಯಲಾಗುವುದು ಎಂದು ಹೇಳಿದರು.

ಈಗ ಲಘು ಮೋಟಾರು ವಾಹನಗಳು ಮತ್ತು ಭಾರೀ ವಾಹನಗಳ ಚಾಲನಾ ತರಬೇತಿಗೆ ಅವಕಾಶ ಇದೆ. ಮುಂದೆ ದ್ವಿಚಕ್ರ ವಾಹನಗಳ ಪರೀಕ್ಷಾರ್ಥ ಚಾಲನಾ ತರಬೇತಿಗೆ ಒಂದು ದಿನದ ತರಬೇತಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

10 ಎಕ್ರೆ ಜಮೀನಿನಲ್ಲಿರುವ ಈ ಕೇಂದ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಅಲ್ಲಿ ಏನೆಲ್ಲಾ ಸುಧಾರಣೆ ಮಾಡಬಹುದು ಎಂಬ ವಿಚಾರದ ಬಗ್ಗೆ ಚಿಂತನೆ ನಡೆಸಿ ಪ್ರಸ್ತಾವನೆ ಸಲ್ಲಿಸಲು ಕೇಂದ್ರದ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲಾಗಿದೆ. ಬೆಂಗಳೂರು, ಧಾರವಾಡ, ಶಿವಮೊಗ್ಗ ಈಗಾಗಲೇ ಇಂತಹ ಕೇಂದ್ರ ಇದೆ. ವಿಜಯಪುರ, ವಿಜಯನಗರ, ನಾಗಮಂಗಲ, ಬಳ್ಳಾರಿಯಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಟ್ಯಾಕ್ ಸ್ಥಾಪನೆಯ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ನುಡಿದರು.

ಬೇಡಿಕೆ ಇರುವ ಕಡೆಗಳಿಗೆ ಕರ್ನಾಟಕ ಸಾರಿಗೆ ನಿಗಮದ ಬಸ್‌ಗಳನ್ನು ಹಾಕುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗು ವುದು ಎಂದು ಸಾರಿಗೆ ಮತ್ತು ಮಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಸಾರಿಗೆ ಇಲಾಖೆ ಆಯುಕ್ತ ಯೋಗೀಶ್ ಎ.ಎಂ., ಸಹಾಯಕ ಆಯುಕ್ತ ಸಿ.ಮಲ್ಲಿಕಾರ್ಜುನ, ಶಿವಮೊಗ್ಗ ಜಂಟಿ ಆಯುಕ್ತ ಭೀಮನಗೌಡ ಪಾಟೀಲ್‌, ಮಂಗಳೂರು ಸಾರಿಗೆ ಅಧಿಕಾರಿ ಶ್ರೀಧರ ಮಲ್ಲಾಡ್ ಉಪಸ್ಥಿತರಿದ್ದರು.