ಬಂಟ್ವಾಳ : ಸಾಲವಾಗಿ ಪಡೆದ ಹಣವನ್ನು ವಾಪಸ್ ನೀಡುವುದಾಗಿ ಅಣ್ಣ-ತಮ್ಮನನ್ನು ಕರೆಸಿಕೊಂಡು ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಬಿ.ಮೂಡ ಗ್ರಾಮದ ಪಲ್ಲಮಜಲಿನಲ್ಲಿ ಅಕ್ಟೋಬರ್ 17ರಂದು ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಜಿತ್ ಕುಮಾರ್ ಶೆಟ್ಟಿ (28) ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ಅಕ್ಟೋಬರ್ 18ರಂದು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಬಿ.ಮೂಡ ಗ್ರಾಮದ ನಿವಾಸಿ ಲೋಕೇಶ್ (27) ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಲೋಕೇಶ್ ಅವರ ಸಹೋದರ ಉದಯ ಅವರಿಂದ ಪಲ್ಲಮಜಲು ನಿವಾಸಿ ಅಜಿತ್ ಕಲ್ಲಗುಡ್ಡೆ ಎಂಬಾತ ಹಣ ಪಡೆದುಕೊಂಡಿದ್ದ. ಈ ಹಣವನ್ನು ವಾಪಸ್‌ ನೀಡುವಂತೆ ಉದಯ ಅವರು ಅಜಿತ್‌ನನ್ನು ಕೇಳಿದ್ದರು ಎನ್ನಲಾಗಿದೆ.

ಅಕ್ಟೋಬರ್ 17ರಂದು ರಾತ್ರಿ ಹಣ ವಾಪಸ್ ನೀಡುವುದಾಗಿ ತಿಳಿಸಿದ ಅಜಿತ್, ಉದಯ ಅವರಿಗೆ ಪಲ್ಲಮಜಲಿಗೆ ಬರುವಂತೆ ಹೇಳಿದ್ದಾನೆ. ಅದರಂತೆ ಹಣ ಪಡೆಯಲು ಉದಯ ಅವರು ಪಲ್ಲಮಜಲು ಜಂಕ್ಷನ್‌ಗೆ ತೆರಳಿದ್ದರು. ಈ ವೇಳೆ ತಮ್ಮ ಸಹೋದರ ಲೋಕೇಶ್ ಅವರನ್ನೂ ಸ್ಥಳಕ್ಕೆ ಬರುವಂತೆ ತಿಳಿಸಿದ್ದರು.

ಲೋಕೇಶ್ ಸ್ಥಳಕ್ಕೆ ತಲುಪಿದಾಗ ಆರೋಪಿ ಅಜಿತ್ ಚೂರಿಯಿಂದ ಉದಯ ಅವರಿಗೆ ಇರಿಯುತ್ತಿರುವುದು ಕಂಡುಬಂದಿದೆ. ಈ ವೇಳೆ ತಡೆಯಲು ಮುಂದಾದ ಲೋಕೇಶ್ ಅವರನ್ನೂ ಆರೋಪಿ ಅಟ್ಟಿಸಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಬಳಿಕ ಸ್ಥಳೀಯರು ಗಾಯಗೊಂಡ ಉದಯ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಲೋಕೇಶ್ ನೀಡಿದ ದೂರಿನ ಆಧಾರದ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿ ಪಲ್ಲಮಜಲು ನಿವಾಸಿ ಅಜಿತ್‌ ಕುಮಾ‌ರ್ ಶೆಟ್ಟಿ (28) ಅವರನ್ನು ಅಕ್ಟೋಬರ್ 18ರಂದು ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.