ಮಂಗಳೂರು: ಭಾರೀ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆಯೇ ಮರವೊಂದು ಉರುಳಿಬಿದ್ದು ಕಾರು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದ ಬಾವುಟಗುಡ್ಡೆ ಅಲೋಶಿಯಸ್ ಕಾಲೇಜು ಬಳಿಯ ಒಳ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಘಟನೆಯ ರಭಸಕ್ಕೆ ಮರದ ಕೊಂಬೆಗಳು ಪಕ್ಕದಲ್ಲಿದ್ದ ಕ್ಯಾಂಟೀನ್ ಒಂದರ ಮೇಲೂ ಬಿದ್ದು, ಕ್ಯಾಂಟೀನ್ ಹಾಗೂ ಕಾರಿಗೆ ಹಾನಿಯಾಗಿದೆ. ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಮರ ಹಿಂಭಾಗಕ್ಕೆ ಬಿದ್ದ ಕಾರಣ ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪಾಂಡೇಶ್ವರ ಅಗ್ನಿಶಾಮಕ ದಳ, ಎಸ್ ಡಿಆರ್ ಎಫ್ ಸಿಬ್ಬಂದಿ ಧಾವಿಸಿ, ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಮೆಸ್ಕಾಂ, ಪಾಲಿಕೆ ಅಧಿಕಾರಿ ಸಿಬ್ಬಂದಿಯವರೂ ಭೇಟಿ ನೀಡಿದ್ದಾರೆ.

