ಕಸಬಾ ಬೆಂಗ್ರೆಯ ಫೆರಿ ಪಾಯಿಂಟ್ ಸಮೀಪ ನದಿಯ ಬಳಿ ಮಕ್ಕಳು ಫುಟ್ಬಾಲ್ ಆಡುತ್ತಿದ್ದ ಸಂದರ್ಭದಲ್ಲಿ ಚೆಂಡು ನದಿಗೆ ಬಿದ್ದಿದೆ. ಮಕ್ಕಳಿಗೆ ಸಹಾಯ ಮಾಡಲು ನದಿಗೆ ಇಳಿದು ಚೆಂಡನ್ನು ತೆಗೆಯಲು ಮುಂದಾದ 25 ವರ್ಷದ ಮೊಹಮ್ಮದ್ ಸನಾವುಲ್ಲಾ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ಅತ್ಯಂತ ದುಃಖಕರ ಘಟನೆಯಾಗಿದೆ.

ಸನಾವುಲ್ಲಾ ಅವರು ನೀರಿನಲ್ಲಿ ಮುಳುಗಿದ ವಿಚಾರ ಮಕ್ಕಳಿಂದ ಸ್ಥಳೀಯರಿಗೆ ತಕ್ಷಣ ತಿಳಿದುಬರದ ಹಿನ್ನೆಲೆಯಲ್ಲಿ, ಬಳಿಕ ಹಲವು ಯುವಕರು ನದಿಗೆ ಧುಮುಕಿ ಅವರನ್ನು ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿ ಹೈಲ್ಯಾಂಡ್ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಪವಿತ್ರ ಈದ್ ಮೀಲಾದ್ ಸಂದರ್ಭದಲ್ಲಿ ನಡೆದ ಈ ದುರ್ಘಟನೆ ಕಸಬಾ ಬೆಂಗ್ರೆ ಊರಿನಾದ್ಯಂತ ದುಃಖದ ವಾತಾವರಣವನ್ನು ನಿರ್ಮಿಸಿದೆ. ಇನ್ನೊಬ್ಬರ ಜೀವ ಉಳಿಸಲು ಮುಂದಾದ ಸನಾವುಲ್ಲಾ ಅವರ ಮಾನವೀಯತೆ ಸದಾ ಸ್ಮರಣೀಯ.