ಮಂಗಳೂರು: ಇತ್ತೀಚಿನ ದಿನಗಳಲ್ಲಿ ಪಾಂಡೇಶ್ವರ ಮತ್ತು ಹೊಯ್ಗೆ ಬಜಾರ್ ಕ್ರಾಸಿಂಗ್ ನ ರೈಲ್ವೆ ಗೇಟ್ ಗಳು ಆಗಾಗ್ಗೆ ಮುಚ್ಚುತ್ತಿವೆ. ಇದು ಸಾರ್ವಜನಿಕರಿಗೆ, ವಿಶೇಷವಾಗಿ ಕಚೇರಿ ಸಮಯ ಮತ್ತು ತುರ್ತು ಸಂದರ್ಭಗಳಲ್ಲಿ ಅನಾನುಕೂಲತೆಯನ್ನು ಉಂಟುಮಾಡುತ್ತಿದೆ. ಮಹಾಕಾಳಿ ಪಡ್ಪು ರೈಲ್ವೆ ಅಂಡರ್ಪಾಸ್ ಉದ್ಘಾಟನೆಯ ನಂತರ ಮಂಗಳಾದೇವಿ ಕಡೆಯಿಂದ ಹೆಚ್ಚಿನ ಸಂಚಾರ ನಿರೀಕ್ಷಿಸಲಾಗಿರುವುದರಿಂದ, ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಈ ಕ್ರಾಸಿಂಗ್ಗಳಲ್ಲಿ ದಟ್ಟಣೆ ಇನ್ನಷ್ಟು ಹೆಚ್ಚಾಗಬಹುದು.
ಈ ಸಮಸ್ಯೆಯನ್ನು ಕಡಿಮೆ ಮಾಡಲು ಟ್ರಸ್ಟ್ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಟ್ರೋಲ್ ರೂಮ್ನಲ್ಲಿ ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಂಡು ರೈಲ್ವೆ ಕ್ರಾಸಿಂಗ್ಗಳ ಬಳಿಯ ಸಂಪರ್ಕ ರಸ್ತೆಗಳಲ್ಲಿ ಎಲ್ಇಡಿ ಸಿಗ್ನಲ್ ವ್ಯವಸ್ಥೆಗಳನ್ನುಅಳವಡಿಸುವ ಸಲಹೆಯನ್ನು ನೀಡುತ್ತಿದ್ದೇವೆ. ಈ ಸಿಗ್ನಲ್ ಗಳು ಗೇಟ್ ಬೀಳುವ ಸಮಯವನ್ನು ಸೂಚಿಸುವ ಮೂಲಕ ಜನರು ಮುಂಚಿತವಾಗಿ ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಈ ವಿಷಯದ ಬಗ್ಗೆ ಟ್ರಸ್ಟ್ ಈಗಾಗಲೇ ಗೌರವಾನ್ವಿತ ಜಿಲ್ಲಾಧಿಕಾರಿ ಮತ್ತು ಗೌರವಾನ್ವಿತ ಸಂಸತ್ ಸದಸ್ಯರಿಗೆ ಮನವಿ ಮಾಡಿದೆ.
ಇದರ ಅಂಗವಾಗಿ ನಾಳೆ ಪೂರ್ವಾಹ್ನ 8:30ಕ್ಕೆ, ಪಾಂಡೇಶ್ವರ ಮತ್ತು ಹೊಯ್ಗೆ ಬಜಾರ್ ರೈಲ್ವೆ ಕ್ರಾಸಿಂಗ್ಗಳಲ್ಲಿ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.) ನ “ಅವೇಕ್ ಕುಡ್ಲ” ಪರಿಕಲ್ಪನೆಯಡಿ, ಮಂಗಳೂರು ನಗರ ಸಂಚಾರ ಪೊಲೀಸ್ ಇವರ ಸಹಯೋಗದೊಂದಿಗೆ “ಸಂಚಾರ ಸುರಕ್ಷತೆ ಮತ್ತು ಸಾರ್ವಜನಿಕ ಜಾಗೃತಿ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಶ್ರೀ ಕೆ. ರವಿಶಂಕರ್, ಐಪಿಎಸ್, ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಟ್ರಾಫಿಕ್), ಮಂಗಳೂರು ನಗರ ಪೊಲೀಸ್ ಇವರು ಟ್ರಾಫಿಕ್ ಬ್ಯಾರಿಕೇಡ್ಸ್ ಮತ್ತು ರೈಲ್ವೆ ಗೇಟ್ ವೇಳಾಪಟ್ಟಿ ಫಲಕಗಳನ್ನು ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಈ ಜಾಗೃತಿ ಕಾರ್ಯಕ್ರಮದ ಅಂಗವಾಗಿ, ನಮ್ಮ ತಂಡವು ಸ್ಥಳೀಯ ಸ್ವಯಂಸೇವಕರ ಸಹಕಾರದೊಂದಿಗೆ ರೈಲ್ವೆ ಗೇಟ್ ಮುಚ್ಚುವ ಸಮಯದಲ್ಲಿ ಸಾರ್ವಜನಿಕರಿಗೆ ಸಂಚಾರ ಶಿಸ್ತು ಕುರಿತು ಜಾಗೃತಿ ಮೂಡಿಸಿ, ಸುಗಮ ಸಂಚಾರ ನಿರ್ವಹಣೆಗೆ ಸಹಕರಿಸಲಿದೆ.
ಜ. 20 ರಂದು ಮಾನ್ಯ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ರೈಲ್ವೆ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ನಡೆದ ಸಭೆಯಲ್ಲಿ ನೀಡಿದ ನಿರ್ದೇಶನದಂತೆ, ಅಧಿಕೃತ ಮಾಹಿತಿ ನೀಡುವವರೆಗೆ ಈ ಕೆಳಗೆ ಲಗತ್ತಿಸಿದ ತಾತ್ಕಾಲಿಕ ವೇಳಾಪಟ್ಟಿಯನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಲು ಪ್ರಚಾರ ಮಾಡುವಂತೆ ತಾವು ಸಹಕರಿಸಬೇಕಾಗಿ ವಿನಂತಿಸುತ್ತೇವೆ.

