ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ರಾಹುಲ್ ರತ್ನಂ ಪಾಂಡೆ, ಐಎಎಸ್ ಅವರು ಮಂಗಳವಾರ, ನವೆಂಬರ್ 3ರಂದು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿ, ಸಾರ್ವಜನಿಕ ಸಮಸ್ಯೆಗಳನ್ನು ಪರಿಶೀಲಿಸಿದರು.

ಉಳ್ಳಾಲ ಹೊಯ್ಗೆ ಪ್ರದೇಶಕ್ಕೆ ಭೇಟಿ ನೀಡಿದ ಆಯುಕ್ತರು, ಅಲ್ಲಿನ ಹಾನಿಗೊಳಗಾದ ಕಾಲುಸೇತುವೆ ಹಾಗೂ ಕುಡಿಯುವ ನೀರಿನ ಸೌಲಭ್ಯಕ್ಕೆ ಸಂಬಂಧಿಸಿದ ಸಾರ್ವಜನಿಕರ ದೂರುಗಳ ಪರಿಶೀಲನೆಗಾಗಿ ದೋಣಿಯಲ್ಲಿ ಸಂಚರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಹಾಗೂ ಪೈಪ್‌ಲೈನ್ ಅಳವಡಿಕೆಯ ಕುರಿತು ವಿವರಿಸಿದರು. ಅಲ್ಲದೆ, ಪ್ರದೇಶಕ್ಕೆ ಬಸ್ ನಿಲ್ದಾಣ, ರಸ್ತೆ ಹಾಗೂ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು.

ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ ಆಯುಕ್ತರು, ಸಮಸ್ಯೆಗಳ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಮುಂಬರುವ ದಿನಗಳಲ್ಲಿ ದೀರ್ಘ ಬೇಸಿಗೆ ಹಾಗೂ ಜಿಲ್ಲೆಯಲ್ಲಿ ಬರಗಾಲದಂತಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇರುವುದರಿಂದ, ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡಬೇಕಾಗಿದೆ ಎಂದು ನಿವಾಸಿಗಳಿಗೆ ತಿಳಿಸಿದರು.

ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆಗೆ ಸಂಬಂಧಿಸಿದಂತೆ ಕನಿಷ್ಠ 50 ನಿವಾಸಿಗಳ ಸಹಿ ಹಾಗೂ ಅನುಮೋದನೆಯೊಂದಿಗೆ ಮನವಿ ಪತ್ರವನ್ನು ಸಿದ್ಧಪಡಿಸಿ ನವೆಂಬರ್ 4ರೊಳಗೆ ಪಾಲಿಕೆಗೆ ಸಲ್ಲಿಸುವಂತೆ ಸೂಚಿಸಿದರು. ಮುಂದಿನ ವಾರದೊಳಗೆ ಟೆಂಡರ್‌ಗೆ ಅನುಮೋದನೆ ದೊರೆಯಲಿದ್ದು, ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು. ಈ ಕುರಿತು ಅಧಿಕಾರಿಗಳು ತುರ್ತು ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಬಳಿಕ ಬಜಾಲ್‌ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಪ್ಲಾಸ್ಟಿಕ್ ಫಿಶರ್ (Plastic Fischer) ಎಂಬ ಸ್ವಯಂಸೇವಾ ಸಂಸ್ಥೆ ನಿರ್ವಹಿಸುತ್ತಿರುವ ಮೆಟೀರಿಯಲ್ ರಿಕವರಿ ಪ್ಲಾಂಟ್‌ಗೆ ಭೇಟಿ ನೀಡಿದ ಆಯುಕ್ತರು, ತ್ಯಾಜ್ಯ ಮರುಬಳಕೆ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಚರ್ಚಿಸಿ, ಅವರ ಕಾರ್ಯಚಟುವಟಿಕೆಗಳಿಗೆ ಪಾಲಿಕೆಯಿಂದ ಅಗತ್ಯ ಸಹಕಾರ ಮತ್ತು ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.

ಜೆಪ್ಪಿನಮೊಗರು– ಕುಡ್ಪಾಡಿ ರಸ್ತೆಯ ರಾಜಕಾಲುವೆಗೆ ಭೇಟಿ ನೀಡಿದ ಅವರು, ಪ್ಲಾಸ್ಟಿಕ್ ಫಿಶರ್ ಸಂಸ್ಥೆ ಅಳವಡಿಸಿ ನಿರ್ವಹಿಸುತ್ತಿರುವ ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆ (Trash Boom) ಪರಿಶೀಲಿಸಿದರು. ಆಂಕರಿಂಗ್ ವ್ಯವಸ್ಥೆಯ ಮೂಲಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವ ವಿಧಾನವನ್ನು ಸಂಸ್ಥೆಯ ಪ್ರತಿನಿಧಿಗಳು ವಿವರಿಸಿದರು. ಸಾಮಾನ್ಯ ದಿನಗಳಲ್ಲಿ 7ರಿಂದ 10 ದಿನಗಳಿಗೊಮ್ಮೆ ಹಾಗೂ ಮಳೆಗಾಲದಲ್ಲಿ ನಾಲ್ಕು ದಿನಗಳಿಗೊಮ್ಮೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ನರೇಶ್ ಪಿ. ಶೆಣೈ, ಮಾಜಿ ಕಾರ್ಪೊರೇಟರ್ ವೀಣಾ ಮಂಗಳಾ, ಪರಿಸರ ಎಂಜಿನಿಯರಿಂಗ್ ವಿಭಾಗದ ಹಾಗೂ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.