ಮಂಗಳೂರು: ರಾಷ್ಟ್ರ ಭಕ್ತರ ವೇದಿಕೆ ಮಂಗಳೂರು ನಗರ ದಕ್ಷಿಣ ಇದರ ನೇತೃತ್ವದಲ್ಲಿ ತಿರಂಗ ಯಾತ್ರೆ ನಗರದ ಕುದ್ಮುಲ್‌ ರಂಗರಾವ್‌ ಪುರಭವನದ ಬಳಿಯ ರಾಜಾಜಿ ಪಾರ್ಕ್‌ನಿಂದ ಗೋವಿಂದ ಪೈ ನವಭಾರತ್ ಸರ್ಕಲ್‌ವರೆಗೆ ಬುಧವಾರ ನಡೆಯಿತು.

ವಿವಿಧ ಕಾಲೇಜುಗಳ ಸಹಸ್ರಾರು ವಿದ್ಯಾರ್ಥಿಗಳು ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ರಾಷ್ಟ್ರಧ್ವಜ, ಅತಿ ಉದ್ದನೆಯ ರಾಷ್ಟ್ರಧ್ವಜ ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು’ ದೇಶದ ಸ್ವಾತಂತ್ರಕ್ಕಾಗಿ ಆದೆಷ್ಟೋ ಮಂದಿ ದೇಶಭಕ್ತರು ತ್ಯಾಗ ಮಾಡಿದ್ದಾರೆ.ಅವರನ್ನು ಸ್ಮರಿಸಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ. ಯುವಜನರಲ್ಲಿ ದೇಶದ ಬಗ್ಗೆ ಪ್ರೀತಿ, ಅಭಿಮಾನ, ಗೌರವವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ತಿರಂಗ ಯಾತ್ರೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ‘ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನುಡಿದರು.ಭಾರತ ಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠಲ ಕಿಣಿ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಧುರೀಣ ವಿಕಾಸ್ ಪುತ್ತೂರು ಮುಖ್ಯ ಭಾಷಣ ಮಾಡಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಮಾರ್ ಕುಂಪಲ, ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಕುಮಾರ್ ಕಣ್ಣೂರು, ಮಾಜಿ ಉಪಮೇಯರ್‌ಗಳಾದ ಪೂರ್ಣಿಮಾ, ಭಾನುಮತಿ, ಮೂಡಾದ ಮಾಜಿ ಅಧ್ಯಕ್ಷ ರವಿಶಂಕರ್‌ಮಿಜಾರು, ಪ್ರಮುಖರಾದ ಪೂರ್ಣಿಮಾ ರಾವ್, ಶಕೀಲಾ ಕಾವ, ರಮೇಶ್ ಕಂಡಟ್ಟು,ನಂದನ್ ಮಲ್ಯ ಮತ್ತಿತರರು ಉಸ್ಥಿತರಿದ್ದರು.ದೇಶಭಕ್ತ ಸಂಘಟನೆಯ ಸಂಚಾಲಕ ಅಶ್ವಿತ್ ಕೊಟ್ಟಾರಿ ಸ್ವಾಗತಿಸಿದರು.