ಮಂಗಳೂರು: ಗುಡ್ಡ ಕುಸಿದು ಮೂವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಸಚಿವ ಯು ಟಿ ಖಾದರ್ ಭೇಟಿ ನೀಡಿದರು. ಮಂಗಳೂರಿನ ಕಂಕನಾಡಿ ನಾಗುರಿಯಲ್ಲಿ ದುರಂತ ಸಂಭವಿಸಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಚಿವ ಖಾದರ್ ಪರಿಶೀಲನೆ ನಡೆಸಿದರು.

ಬಳಿಕ ಸಚಿವ ಯು ಟಿ ಖಾದರ್ ಹೇಳಿಕೆ ನೀಡಿದ್ದಾರೆ. ಪ್ರಕೃತಿ ವಿಕೋಪ ಯಾವಾಗ ಹೇಗೆ ಆಗುತ್ತೆ ಗೊತ್ತಿಲ್ಲ. ರಾತ್ರೋ ರಾತ್ರಿ ಘಟನೆಯಾದಾಗ ಊರವರು ಪೊಲೀಸ್ ಅಧಿಕಾರಿಗಳು ರಕ್ಷಣೆ ಕಾರ್ಯಾಚರಣೆ ಮಾಡಿದ್ದಾರೆ. ಅವರಿಗೆ ಧನ್ಯವಾದಗಳಗಳನ್ನ ಸಲ್ಲಿಸುತ್ತೇನೆ. ಬದುಕುಳಿದವರಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡುತ್ತೇವೆ ಎಂದರು.

ಮೃತಪಟ್ಟ ಪ್ರತಿಯೊಬ್ಬರಿಗೆ 5 ಲಕ್ಷ ಪರಿಹಾರ ನೀಡುತ್ತೇವೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಚರ್ಚಿಸಿದ್ದೇನೆ. ಇದು ನಮ್ಮೆಲ್ಲರಿಗೂ ಎಚ್ಚರಿಕೆಯ ಕರೆ ಗಂಟೆ. ಮಳೆ ಪ್ರಾರಂಭವಾಗಿದ್ದು ಮಾತ್ರ ಅದಾಗಲೇ ದೊಡ್ಡ ದುರಂತ ಸಂಭವಿಸಿದೆ. ಅದರಲ್ಲೂ ಮಂಗಳೂರು ಎತ್ತರ ತಗ್ಗು ಪ್ರದೇಶ. ಅಧಿಕಾರಿಗಳು ಆದಷ್ಟು ಅಪಾಯಕಾರಿ ಪ್ರದೇಶಕ್ಕೆ ಭೇಟಿ ನೀಡಿ ಜನರಿಗೆ ಎಚ್ಚರಿಕೆ ನೀಡುತ್ತಾರೆ. ಆದರೆ ಜನರು ಸ್ವಯಂ ಪ್ರೇರಿತವಾಗಿ ಜಾಗರೂಕರಾಗಿ.

ಸರಕಾರಿ ಜಾಗದಲ್ಲಿ ಅಪಾಯಕಾರಿ ಸ್ಥಿತಿ ಇದ್ರೆ ಸರಿ ಮಾಡಿಕೊಡುತ್ತೇವೆ. ಆದರೆ ಖಾಸಗಿ ಜಾಗದಲ್ಲಿ ಈ ರೀತಿ ಕಾಂಪೌಂಡ್ ಕುಸಿದಾಗ ನಮಗೇನು ಮಾಡೋದಕ್ಕೆ ಆಗಲ್ಲ. ಮನೆ ದುರಸ್ಥಿ ನಿಟ್ಟಿನಲ್ಲಿ ಇಲ್ಲಿ ಮನೆ ಮಾಲೀಕರಿದ್ದಾರೆ. ಹಾಗಾಗಿ ನೇರ ಸಂತ್ರಸ್ತರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ಮನೆ ಮಾಲೀಕರಿಗೆ ಪರಿಹಾರ ಕೊಡುತ್ತೇವೆ ಅವರು ಮನೆ ದುರಸ್ಥಿ ಮಾಡಿ ಸರಿಮಾಡಿಕೊಡಬೇಕು. ಮಂಗಳೂರಿನಲ್ಲಾದ ಈ ಘಟನೆ ಇಡಿ ಕರಾವಳಿಗೆ ಸಂದೇಶ ಎಂದರು.

ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಡೇಂಜರ್ ಇದೆ ಅಂದ್ರೆ ದೂರ ನಿಂತು ಸರಕಾರಕ್ಕೆ ತಿಳಿಸಬೇಕು. ಏನೇ ವ್ಯವಸ್ಥೆ ಇದ್ರೂ ಪ್ರಕೃತಿ ವಿಕೋಪ ಆದಾಗ ಏನೂ ಮಾಡೋಕೆ ಆಗಲ್ಲ. ಏನೂ ಆಗಬಾರದು ಅನ್ನೋದೇ ನಮ್ಮ ಪ್ರಾರ್ಥನೆ. ತೊಕ್ಕೊಟ್ಟು ತಡೆಗೋಡೆ ಕುಸಿದ ಪ್ರದೇಶಕ್ಕೆ ಭೇಟಿ ನೀಡುತ್ತೇನೆ. ಖಾಸಗಿಯವರು ಕಟ್ಟಿದ ಕಟ್ಟಡದಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಅದಕ್ಕೆ ಅವರೇ ಹೊಣೆ. ಕಂದಾಯ ಸಚಿವರೊಂದಿಗೆ ಬೆಳಗ್ಗೆ ಚರ್ಚೆ ಮಾಡಿದ್ದೇನೆ ಎಂದರು.