ದಕ್ಷಿಣಕನ್ನಡ: ಪುತ್ತೂರು ತಾಲೂಕಿನ ಆದರ್ಶ ನಗರದಲ್ಲಿ ಬಸ್ ನಿಲ್ದಾಣವೊಂದು ತಲೆ ಎತ್ತಿ ನಿಂತಿದೆ.  ಪುತ್ತೂರು- ಉಪ್ಪಿನಂಗಡಿ ಮಾರ್ಗವಾಗಿ ತೆರಳುವ ಯಾವ ಪ್ರಯಾಣಿಕನೂ ಈ ಬಸ್ ನಿಲ್ದಾಣವನ್ನೊಮ್ಮೆ ನೋಡದೆ ಮುಂದೆ ಸಾಗಲು ಸಾಧ್ಯವೇ ಇಲ್ಲ. ಹೌದು ಅಷ್ಟೊಂದು‌ ಆಕರ್ಷಕವಾಗಿ ಈ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಆದರ್ಶ ನಗರದ ಆಯುರ್ವೇದ ವೈದ್ಯರ‌ ಕುಟುಂಬವೊಂದು ಈ‌ ಆಕರ್ಷಣ ಬಸ್ ನಿಲ್ದಾಣವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿದೆ.

ಸಾಮಾನ್ಯವಾಗಿ ಬಸ್ ನಿಲ್ದಾಣವೆಂದರೆ ಒಂದು ಮೇಲ್ಛಾವಣಿ, ಕುಳಿತುಕೊಳ್ಳಲು ಕಲ್ಲು ಹಾಸಿದ ಆಸನ ಬಿಟ್ಟರೆ ಬೇರೇನೂ ಇರೋದಿಲ್ಲ. ಆದರೆ ಕೆಲವೊಂದು ಬಸ್ ನಿಲ್ದಾಣಗಳು ಹೈಟೆಕ್ ಸ್ವರೂಪದಲ್ಲಿಯೂ ಇರುತ್ತೆ. ಇಂತಹ ಹೈಟೆಕ್ ಬಸ್ ನಿಲ್ದಾಣಗಳ ಸಾಲಿಗೆ ಆದರ್ಶ ನಗರದ ಈ ಬಸ್ ನಿಲ್ದಾಣವೂ ಸೇರುತ್ತದೆ.

ಸಂಪೂರ್ಣ ಕೆಂಪು ಕಲ್ಲಿನಿಂದ ನಿರ್ಮಿಸಲಾಗಿರುವ ಈ ಬಸ್ ನಿಲ್ದಾಣವನ್ನು ನೈಸರ್ಗಿಕವಾಗಿ ಕಟ್ಟಲಾಗಿದೆ. ಕಾಂಕ್ರೀಟ್ ಕಟ್ಟಡದ ಬದಲು ನೈಸರ್ಗಿಕವಾಗಿ ಸಿಗುವ ಕೆಂಪುಕಲ್ಲಿನಿಂದಲೇ ಈ ಬಸ್ ನಿಲ್ದಾವನ್ನು ನಿರ್ಮಿಸಲಾಗಿದ್ದು, ಇದಕ್ಕೆ ಹಚ್ಚಲಾಗಿರುವ ಬಣ್ಣವೂ ರಾಸಾಯನಿಕ ಮುಕ್ತವಾಗಿದ್ದು, ಪರಿಸರಸ್ನೇಹಿ ಬಸ್ ನಿಲ್ದಾಣವಾಗಿಯೂ ಇದು ರೂಪುಗೊಂಡಿದೆ.

ಬಸ್ ನಿಲ್ದಾಣದ ಸ್ವರೂಪ ಶಾಸ್ತ್ರೀಯವಾಗಿರಬೇಕು ಎನ್ನುವ ಕಾರಣಕ್ಕೆ ಕಟ್ಟಡದ ವಿನ್ಯಾಸವನ್ನು ಪಾರಂಪರಿಕ ಸ್ವರೂಪಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ‌.