ಮಂಗಳೂರು: ಧರ್ಮಸ್ಥಳ ಕ್ಷೇತ್ರ, ಶ್ರೀ ಮಂಜುನಾಥ ಸ್ವಾಮಿಯ ಹೆಸರು ಕೆಡುತ್ತದೆ ಎಂಬುದಕ್ಕೂ ಎಸ್ಐಟಿ ತನಿಖೆಗೆ ಏನೂ ಸಂಬಂಧವಿಲ್ಲ. ದೇವಸ್ಥಾನ, ಮಂಜುನಾಥ ಸ್ವಾಮಿಯ ಪಾವಿತ್ರ್ಯತೆ ಎಲ್ಲೂ ಹಾಳಾಗಿಲ್ಲ. ಧರ್ಮಸ್ಥಳ ಕ್ಷೇತ್ರದಲ್ಲಿ ಅಗೆದಿಲ್ಲ. ಕಾಡಿನಲ್ಲಿ ಅಗೆದಿರೋದು. ಅನಾವಶ್ಯಕವಾಗಿ ಬಿಜೆಪಿ ತಿರುಚಿ ಅವರೇ ಉದ್ದೇಶ ಪೂರ್ವಕವಾಗಿ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಗುಂಡಿ ಅಗೆಯುವುದರಿಂದ ಭಕ್ತರ ಭಕ್ತಿಗೆ ತೊಂದರೆಯಾಗುದಿಲ್ಲ. ಅಷ್ಟು ಸುಲಭವಾಗಿ ನಂಬಿಕೆ ಕಳೆದುಕೊಳ್ಳುದಿಲ್ಲ, ಈ ರೀತಿಯಲ್ಲಿ ಪ್ರತಿಬಿಂಬಿಸುವುದು ಬೇಕಾಗಿಲ್ಲ. ಬಿಜೆಪಿಯವರೇ ಅಪಪ್ರಚಾರ ಮಾಡಿಲ್ವಾ?. ಬಲಬಂಥೀಯರು ಎಷ್ಟು ಅಪಪ್ರಚಾರ ಮಾಡಿದ್ದಾರೆ. ಪರೇಶ್ ಮೇಸ್ತಾ ಬಗ್ಗೆ ಎಷ್ಟು ಅಪಪ್ರಚಾರ ಮಾಡಿದ್ದರು.ಅವರು ಮಾಡಿದಾಗ ಏನು ತೊಂದರೆ ಇಲ್ಲ, ಇನ್ನೊಬ್ಬರು ಮಾಡಿದಾಗ ಮಾತ್ರ ತೊಂದರೆಯೇ?. ಸಣ್ಣ ವಿಚಾರಕ್ಕೆ ಕೋಮ ಬಣ್ಣ ತುಂಬುವುದು, ಅಪಪ್ರಚಾರದಲ್ಲಿ ನಂಬಿಕೆ ಇಟ್ಟವರು ಬಿಜೆಪಿ ಹಾಗೂ ಸಂಘ ಪರಿವಾರ ಎಂದು ಆಗ್ರಹಿಸಿದರು.
ಧರ್ಮಸ್ಥಳ ಪ್ರಕರಣದಲ್ಲಿ ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ, ಯಾವುದೇ ಒತ್ತಡಕ್ಕೆ ಮಣಿಯದೆ ನಿಜಾಂಶ ಪತ್ತೆಹಚ್ಚಲು ಎಸ್ಐಟಿ ತನಿಖೆ ನಡೆಸುತ್ತಿದೆ. ಗೃಹಸಚಿವರು ಸದನದಲ್ಲಿ ಸೋಮವಾರ ಈ ಬಗ್ಗೆ ಉತ್ತರ ಕೊಡಲಿದ್ದಾರೆ.
ರಾಷ್ಟ್ರೀಯ ಸುದ್ದಿವಾಹಿನಿಯೊಂದರಲ್ಲಿ ಸಾಕ್ಷಿ ದೂರುದಾರ ಹೇಳಿಕೆ ನೀಡುವುದರ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಹೆಣ ಹೂತು ಹಾಕಿದ್ದೇನೆ ಎಂಬುದು ದೇಶಮಟ್ಟದಲ್ಲಿ ಚರ್ಚೆಗೊಳಗಾಗುತ್ತಿರುವ ಗಂಭೀರ ಆರೋಪ. ಆದ್ದರಿಂದ ಎಸ್ಐಟಿ ತನಿಖೆಗೆ ನೀಡಿರುವುದರಿಂದ ತನಿಖೆ ಬಗ್ಗೆ ಯಾರಿಗೂ ಅನುಮಾನವಿಲ್ಲ. ಸತ್ಯಾಂಶವನ್ನು ಜನರ ಮುಂದೆ ಇಡುತ್ತೇವೆ. ನಿಜಾಂಶ, ಸತ್ಯ, ಸಾಕ್ಷಿಗೆ ತಕ್ಕ ಹಾಗೆ ಎಸ್ಐಟಿ ಹಾಗೂ ಸರಕಾರ ನಡೆದುಕೊಳ್ಳುತ್ತದೆ ಎಂದು ಹೇಳಿದರು.
ಪ್ರಕರಣದ ಹಿಂದೆ ಭಾರೀ ದೊಡ್ಡ ಷಡ್ಯಂತರ ನಡೆದಿದೆ ಎಂದು ಡಿಸಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ಇರಬಹುದು, ಅದನ್ನು ಕೂಡಾ ಅಲ್ಲಗಳೆಯಲು ಸಾಧ್ಯವಿಲ್ಲ. ಎಲ್ಲವೂ ತನಿಖೆಯಿಂದ ಹೊರಬರಬೇಕಿದೆ.
ಇನ್ನೆಷ್ಟು ಸ್ಪಾಟ್ ಅಗೆಯಲಾಗುತ್ತದೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಅದನ್ನು ಪೊಲೀಸರು ನಿರ್ಧರಿಸುತ್ತಾರೆ. ಅಗೆಯೋದು ಅಷ್ಟೊಂದು ಸುಲಭದ ಕೆಲಸವಲ್ಲ. ಪೊಲೀಸರು ಕಷ್ಟಪಟ್ಟು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ಪೊಲೀಸರಿಗೆ ಈ ಬಗ್ಗೆ ಮುಕ್ತ ಅವಕಾಶ ನೀಡಿದ್ದೇವೆ. ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ.
ಪ್ರಕರಣವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂಬ ಪ್ರಶ್ನೆಗೆ, ಬಿಜೆಪಿಗೆ ರಾಜಕೀಯ ಲಾಭ ಪಡೆಯುವ ಪಕ್ಷ. ಎಸ್ಐಟಿ ತನಿಖೆ ಆರಂಭದ ಹತ್ತು ದಿವಸಗಳ ಕಾಲ ಅವರು ಏನೂ ಮಾತನಾಡಿಲ್ಲ. ಆಗ ಅವರೂ ಎಸ್ಐಟಿ ಮಾಡಿ ಎಂದು ಹೇಳಿದ್ದರು. ಈಗ ವಿಚಾರ ಹೊರ ಬರುತ್ತಿದೆ ಎಂದಾಗ ಇದರಲ್ಲಿ ಹೇಗೆ ತಮ್ಮ ರಾಜಕೀಯ ಲಾಭ ಮಾಡಬಹುದು ಎಂದು ಅವರು ಲೆಕ್ಕಾಚಾರ ಹಾಕುತ್ತಿದ್ದಾರೆ. ನಮಗೆ ನಿಜಾಂಶ ಹೊರಬರಬೇಕೇ ಹೊರತು, ಲಾಭ ನಷ್ಟದ ಪ್ರಶ್ನೆಯಲ್ಲ. ಧಾರ್ಮಿಕ ವಿಚಾರವನ್ನು ದುರ್ಬಳಕೆ ಮಾಡುವುದೇ ಅವರ ಹಳೆಯ ಚಾಳಿ ಎಂದರು.
ಎಸ್ಐಟಿ ತನಿಖೆಗೆ ನೀಡಿರುವುದು ಎಡಪಂಥೀಯರ ಒತ್ತಾಯದಿಂದ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ದಿನೇಶ್ ಗುಂಡೂರಾವ್, ಇಲ್ಲ ನಾನು ಹೇಳಿರುವುದು ಅನೇಕ ಸಂಘಟನೆಗಳು, ವ್ಯಕ್ತಿಗಳು ಅದರಲ್ಲಿ ಎಡಪಂಥೀಯರೂ ಸೇರಿ ಒತ್ತಡ ಹಾಕಿರುವುದರಿಂದ ಎಸ್ಐಟಿ ಆಗಿರುವುದು. ಸ್ವತಃ ಡಾ.ಡಿ.ವೀರೇಂದ್ರ ಹೆಗ್ಗಡೆಯವರೇ ಎಸ್ಐಟಿ ಆದರೆ ಉತ್ತಮ ಎಂದು ಹೇಳಿದ್ದರು. ನಾನು ದ.ಕ.ಜಿಲ್ಲಾ ಪೊಲೀಸರೇ ತನಿಖೆ ಮಾಡುತ್ತಾರೆ. ಎಸ್ಐಟಿ ಅವಶ್ಯಕತೆ ಇಲ್ಲ ಎಂದು ಹೇಳಿದ್ದೆ. ಆದರೆ ಈಗ ಎಸ್ಐಟಿ ಮಾಡಿರುವುದು ಉತ್ತಮವಾಗಿದೆ. ಯಾರಿಗೂ ಈಗ ಅನುಮಾನವಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

