ಮಂಗಳೂರು : ಹಜ್ ಭವನಕ್ಕೆ ಜಾಗವಿದೆ, ಅನುದಾನವೂ ಇದೆ; ಆದರೂ ವಿಳಂಬ ಯಾಕೆ? ಮಂಗಳೂರಿನಲ್ಲಿ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಹಜ್ ಭವನವನ್ನು ಕೂಡಲೇ ನಿರ್ಮಿಸಬೇಕು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ನೇರ ವಿಮಾನ ಸೌಲಭ್ಯ ಕಲ್ಪಿಸಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಒತ್ತಾಯಿಸಿದ್ದಾರೆ.

ಅವರು ಮಂಗಳೂರಿನ ತನ್ನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಜಿಲ್ಲೆಯ ಹಜ್ ಯಾತ್ರಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದರು. ಭಾರತದಿಂದ ಪ್ರತಿ ವರ್ಷ ಸುಮಾರು 1.70 ಲಕ್ಷ ಜನರು ಹಜ್ ಯಾತ್ರೆ ಕೈಗೊಳ್ಳುತ್ತಿದ್ದು, ಕರ್ನಾಟಕದಿಂದ ಹಜ್ ಕಮಿಟಿ ಮೂಲಕ ಸುಮಾರು 7,000 ಜನರಿಗೆ ಅವಕಾಶ ಸಿಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯೊಂದರಿಂದಲೇ ಸುಮಾರು 1,300 ಯಾತ್ರಿಕರು ತೆರಳುತ್ತಾರೆ. ಆದರೆ, ಮಂಗಳೂರಿನಲ್ಲಿ ಹಜ್ ಭವನ ಇಲ್ಲದ ಕಾರಣ ಮತ್ತು ನೇರ ವಿಮಾನಯಾನ ವ್ಯವಸ್ಥೆ ಇಲ್ಲದ ಕಾರಣ, ಯಾತ್ರಿಕರು ಬೆಂಗಳೂರಿಗೆ ಹೋಗಿ ಅಲ್ಲಿ ನಾಲ್ಕು ದಿನಗಳ ಕಾಲ ತಂಗಬೇಕಾದ ಅನಿವಾರ್ಯತೆ ಇದೆ. ಇದು ವಿಶೇಷವಾಗಿ ಹಿರಿಯ ನಾಗರಿಕರಿಗೆ ಹೆಚ್ಚಿನ ಕಿರಿಕಿರಿ ಉಂಟುಮಾಡುತ್ತಿದೆ ಎಂದು ಸಾದತ್ ಅಸಮಾಧಾನ ವ್ಯಕ್ತಪಡಿಸಿದರು.

ಹಜ್ ಭವನ ನಿರ್ಮಾಣಕ್ಕಾಗಿ ಬಜೆಟ್‌ನಲ್ಲಿ 10 ಕೋಟಿ ರೂ. ಅನುದಾನ ಘೋಷಣೆಯಾಗಿ ಹಲವು ವರ್ಷಗಳೇ ಕಳೆದಿದ್ದರೂ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಆರಂಭವಾಗಿಲ್ಲ. ಮುಡಿಪು ಮತ್ತು ಬಜ್ಜೆಯ ಕೆಂಜಾರ್ ಬಳಿ 3.5 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಇನಾಯತ್ ಅಲಿ ಎಂಬುವವರು ತಮ್ಮ ಸ್ವಂತ ಆಸ್ತಿಯನ್ನು ದಾನವಾಗಿ ನೀಡಿದ್ದಾರೆ. ಜಾಗ ಮತ್ತು ಹಣದ ಲಭ್ಯತೆ ಇದ್ದರೂ ಕಳೆದ ಒಂದೂವರೆ ವರ್ಷದಿಂದ ಟೆಂಡರ್ ಪ್ರಕ್ರಿಯೆ ನಡೆಯದಿರುವುದು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದರು.

ಕೊರೊನಾ ಸಮಯದವರೆಗೆ ಮಂಗಳೂರಿನಿಂದ ಹಜ್ ಯಾತ್ರೆಗೆ ನೇರ ವಿಮಾನ ಸೌಲಭ್ಯವಿತ್ತು, ಆದರೆ ಆನಂತರ ಅದನ್ನು ಸ್ಥಗಿತಗೊಳಿಸಲಾಗಿದೆ. ನೇರ ವಿಮಾನಯಾನಕ್ಕೆ ಕೇಳಿದರೆ ಪೂರಕ ವ್ಯವಸ್ಥೆ ಇಲ್ಲ ಎಂಬ ಉತ್ತರ ಸಿಗುತ್ತಿದೆ. ಕಳೆದ 10-15 ವರ್ಷಗಳಿಂದ ಇಲ್ಲದ ಸಮಸ್ಯೆ ಈಗ ಹೇಗೆ ಉಂಟಾಯಿತು? ಇಲ್ಲಿ ಸಾಕಷ್ಟು ಮಸೀದಿಗಳು, ಭವನಗಳು ಹಾಗೂ ಹೋಟೆಲ್‌ಗಳಿವೆ; ಯಾತ್ರಿಕರಿಗೆ ಉಳಿದುಕೊಳ್ಳಲು ಕೆಲವರು ತಮ್ಮ ಮನೆಗಳಲ್ಲೇ ವ್ಯವಸ್ಥೆ ಮಾಡುತ್ತಾರೆ. ಮಂಗಳೂರಿನಿಂದ ನೇರ ವಿಮಾನ ಕಲ್ಪಿಸಿದರೆ ಉಡುಪಿ ಮತ್ತು ಕಾಸರಗೋಡು ಸೇರಿದಂತೆ ಸುಮಾರು 3 ರಿಂದ 4 ಸಾವಿರ ಜನರಿಗೆ ಅನುಕೂಲವಾಗಲಿದೆ. ಆದ್ದರಿಂದ ಕೂಡಲೇ ಇಲ್ಲಿ ಸುಸಜ್ಜಿತ ಹಜ್ ಭವನ ನಿರ್ಮಿಸಬೇಕು ಮತ್ತು ನೇರ ವಿಮಾನಯಾನ ವ್ಯವಸ್ಥೆ ಕಲ್ಪಿಸಬೇಕು ಎಂದು ಅನ್ವ‌ರ್ ಆಗ್ರಹಿಸಿದರು.