ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಜಿಲ್ಲೆಯ ಹಲವೆಡೆ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಮಂಗಳೂರು‌ ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್ ಗುಡ್ಡ ಮತ್ತೆ ಕುಸಿಯುವ ಆತಂಕ ಹೆಚಾಗಿದೆ. ನಿನ್ನೆ ಗುಡ್ಡ ಕುಸಿದು ಒಂದು ಬದಿಯ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದೆ.

ಒಂದು ಬದಿಯ ರಸ್ತೆಯಲ್ಲೇ ಎರಡು ಕಡೆಯ ಸಂಚಾರ ಮುಂದುವರಿದಿದೆ. ರಾ.ಹೆ.169, ಮಂಗಳೂರು-ಮೂಡಬಿದ್ರೆ-ಕಾರ್ಕಳ ಸಂಪರ್ಕಿಸೋ ರಸ್ತೆ ಇದಾಗಿದ್ದು, ಆತಂಕದಲ್ಲೇ ವಾಹನ ಸವಾರರು ಪ್ರಯಾಣ‌ ಮಾಡುತ್ತಿದ್ದಾರೆ. ಸದ್ಯ ಕುಸಿದಿರುವ ಬಂಡೆಕಲ್ಲು, ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಹಿಟಾಚಿ ಯಂತ್ರದ ಮೂಲಕ ಭರದಿಂದ ತೆರವು ಕಾರ್ಯಾಚರಣೆ ಸಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲೇ ಸಂಚಾರಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ.