ಮಂಗಳೂರು: ಪ್ರತಿಪಕ್ಷ ಇವತ್ತು ಜನ ಸಾಮಾನ್ಯರ ಟ್ಯಾಕ್ಸ್ ದುಡ್ಡು ವ್ಯರ್ಥ ಮಾಡ್ತಿದೆ. ವಿಧಾನಸಭೆ ಅಧಿವೇಶನ ರಾಜಕೀಯ ಮಾಡುವ ಸಭಾಂಗಣ ಆಗಬಾರದು. ಇದೊಂದು ಮಹತ್ವದ ಅಧಿವೇಶನ, ಬರ, ಅತಿವೃಷ್ಟಿ ಬಗ್ಗೆ ಚರ್ಚೆ ಆಗಬೇಕು ಎಂದು ಮಂಗಳೂರಿನಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದರು.

ಆದರೆ ಇದನ್ನ ಸಂಪೂರ್ಣ ವ್ಯರ್ಥ ಮಾಡಿರೋದನ್ನ ಜನರು ಕ್ಷಮಿಸಲ್ಲ. ರಾಜಕೀಯ ಮಾಡಲಿ, ಆದರೆ ರಾಜ್ಯಕ್ಕೆ ಇದರಿಂದ ಅನ್ಯಾಯ ಆಗಬಾರದು. ಸ್ಪಷ್ಟವಾದ ಕಾರಣ ಇಲ್ಲದೇ ಗದ್ದಲ ಮಾಡೋದರ ಹಿಂದೆ ಹಿಡನ್ ಅಜೆಂಡಾ ಇದೆ. ನೋಟೀಸ್ ಕೊಟ್ಟು ಚರ್ಚೆ ಮಾಡುವ ಬದಲು ರಾಜಕೀಯ ಮಾಡ್ತಿದಾರೆ. ನಾಗೇಂದ್ರ ಮಂತ್ರಿಯಾಗಿದ್ದಾಗ ಅನುದಾನ ದುರ್ಬಳಕೆ ಬಗ್ಗೆ ಆರೋಪದಲ್ಲಿ ಅವರು ರಾಜೀನಾಮೆ ಕೊಟ್ಟಿದ್ದರು ಎಂದರು.

ರಾಜೀನಾಮೆ ಕೊಟ್ಡ ಬಳಿಕ ಸಚಿವ ಸ್ಥಾನದಿಂದ ದೂರ ಇದ್ದರು. ಅವರು ಈಗಾಗಲೇ ಎಲ್ಲಾ ರೀತಿಯ ತನಿಖೆ ಎದುರಿಸಿ ಕ್ಲೀನ್ ಚಿಟ್ ಸಿಕ್ಕಿದೆ. ಹೋದ ಹಣ ಕೂಡ ಮತ್ತೆ ಸರ್ಕಾರದ ಇಲಾಖೆಗೆ ವಾಪಾಸ್ ಬಂದಿದೆ. ತಪ್ಪು ಮಾಡಿದ ಅಧಿಕಾರಿಗಳ ವಿರುದ್ದವೂ ಕ್ರಮ ಆಗಿದೆ. ದೋಷ ಮುಕ್ತವಾಗಿ ಬಂದ ನಂತರ ಕಾನೂನು ಪ್ರಕಾರ ಮಂತ್ರಿ ಸ್ಥಾನ ಕೊಡಲಾಗಿದೆ. ಪಕ್ಷ ತೀರ್ಮಾನ ಮಾಡಿದ ತಕ್ಷಣ ಮಂತ್ರಿಗಳು ಮಂತ್ರಿ ಆಗಲ್ಲ ಎಂದರು.

ಎಲ್ಲಾ ಕಾನೂನು ಬದ್ದವಾಗಿ ನೋಡಿ ಗವರ್ನರ್ ಮೂಲಕ ಪ್ರತಿಜ್ಞೆ ಸ್ವೀಕರಿಸ್ತಾರೆ. ಹಾಗಾದರೆ ಗವರ್ನರ್ ಗೆ ಗೊತ್ತಿಲ್ವ? ಅವರು ಎಲ್ಲಾ ನೋಡಿಯೇ ಮಾಡಿದ್ದಾರೆ. ರಾಜ್ಯದ ತನಿಖಾ ಸಂಸ್ಥೆ ಅವರಿಗೆ ಕ್ಲೀನ್ ಚಿಟ್ ಕೊಟ್ಟಿದೆ. ಬಿಜೆಪಿಯವರು ಹೊರಗೆ ಪಾದಯಾತ್ರೆ ಮಾಡಲಿ, ಆದರೆ ವಿಧಾನಸಭೆಯಲ್ಲಿ ರಾಜಕೀಯ ಬೇಡ ಎಂದರು.