ಮಂಗಳೂರು: ಕದ್ರಿ ಪಾರ್ಕಿನಲ್ಲಿ ಸರಿಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಗೀತ ಕಾರಂಜಿ ಮತ್ತು ಲೇಸರ್ ಶೋ ಆರಂಭಿಸಲಾಗಿತ್ತು. ಆರಂಭಗೊಂಡ ಮೊದಲ ಕೆಲವು ತಿಂಗಳ ಕಾಲ ಜನರನ್ನು ರಂಜಿಸಿದ್ದ ಸಂಗೀತ ಕಾರಂಜಿ, ಲೇಸರ್ ಶೋ ಕಳೆದ ಆರು ವರ್ಷಗಳಿಂದ ಸ್ಥಗಿತವಾಗಿದ್ದು, ಮತ್ತೆ ನರ್ತಿಸಲೇ ಇಲ್ಲ. ಈ ಉದ್ಯಾನವನ್ನು ನಗರದ ಸಾಂಸ್ಕೃತಿಕ ಹಾಗೂ ಮನೋರಂಜನಾ ಕೇಂದ್ರವನ್ನಾಗಿ ರೂಪಿಸುವ ಭರವಸೆ ಮರೀಚಿಕೆಯಾಗಿ ಮುಂದುವರಿದಿದೆ.

ಮೋಟಾರು ಪಂಪ್‌ಗಳು, ಪೈಪುಗಳು, ಲಕ್ಷಗಟ್ಟಲೆ ಮೌಲ್ಯದ ಪರಿಕರಗಳು ತುಕ್ಕು ಹಿಡಿದು ಹೋಗುತ್ತಿರುವುದನ್ನು ಕಂಡಾಗ ಯಾರಿಗಾದರೂ ಆಕ್ರೋಶ ಬರುವುದು ಸಹಜವೇ. ಇದು ಸ್ಮಾರ್ಟ್‌ ಸಿಟಿ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿನ ಹಳೆ ಜಿಂಕೆ ಪಾರ್ಕ್‌ನ ಸಂಗೀತ ಕಾರಂಜಿ ಮತ್ತು ಲೇಸರ್ ಶೋ ನಡೆಯುವ ಜಾಗದ ನೋಟ. ಇದು ಕಳೆದ ಆರು ವರ್ಷಗಳಿಂದ ಸ್ಥಗಿತಗೊಂಡಿದ್ದು, ಈ ಉದ್ಯಾನವನ್ನು ಸಾಂಸ್ಕೃತಿಕ ಮತ್ತು ಮನರಂಜನಾ ಕೇಂದ್ರವಾಗಿಸಲು ಇದ್ದ ಭರವಸೆ ಕೂಡಾ ನಿರ್ಲಕ್ಷ್ಯದಿಂದ ಕನ್ನಡಿ ಹಿಡಿದಿದೆ.

ಸಂಗೀತ ಕಾರಂಜಿ ಮತ್ತು ಲೇಸರ್‌ ಶೋ ಸಲುವಾಗಿ 4.01 ಎಕರೆ ಜಾಗದಲ್ಲಿ  5 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿತ್ತು. ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 2018ರ ಜ.7ರಂದು ಇದನ್ನು ಲೋಕಾರ್ಪಣೆ ಮಾಡಿದ್ದರು. ಶುರುವಾದ ಕೆಲವೇ ದಿನಗಳಲ್ಲಿ ಇಲ್ಲಿ ಸಂಗೀತದ ಲಯಕ್ಕನುಗುಣವಾಗಿ ನರ್ತಿಸುವ ಬಣ್ಣ ಬಣ್ಣದ ಕಾರಂಜಿ ಪ್ರೇಕ್ಷಕರನ್ನು ಬೆರಗುಗೊಳಿಸಿತ್ತು.

ತುಳುನಾಡಿನ ಸಮೃದ್ಧಿ ಸಂಸ್ಕೃತಿಯನ್ನು ಬಿಂಬಿಸುವ ಯಕ್ಷಗಾನ, ಕಂಬಳ, ಭೂತಾರಾಧನೆಯಂತಹ ಜನಪದೀಯ ಚಿತ್ರಣಗಳು ಭಾರಿ ಪ್ರಮಾಣದಲ್ಲಿ ಪ್ರೇಕ್ಷಕರನ್ನೂ ಸೆಳೆದಿದ್ದವು. ತಂತ್ರಜ್ಞಾನ ಹಾಗೂ ಸಂಸ್ಕೃತಿಯ ಸಮ್ಮಿಲನದಂತಿದ್ದ ಈ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಜನ ಕುಟುಂಬ ಸಮೇತ ಭೇಟಿ ನೀಡಿದ್ದರು. ಆದರೆ ಕೊರೊನಾದ ಬಳಿಕ ನರ್ತನ ನಿಲ್ಲಿಸಿದ ಕಾರಂಜಿ ಮತ್ತೆ ನರ್ತಿಸಲೇ ಇಲ್ಲ. ಇಲ್ಲಿನ ನೀರಿನ ತೊಟ್ಟಿಯಲ್ಲಿ ಅಳವಡಿಸಿರುವ ಯಂತ್ರಗಳಿಗೆ ಈಗ ತುಕ್ಕು ಹಿಡಿದಿದೆ. ಈ ಪರಿಸರದಲ್ಲಿ ಹುಲ್ಲು ಹಾಗೂ ಕಳೆ ಆವರಿಸಿದೆ. ಇಲ್ಲಿ ಕಲ್ಪಿಸಲಾಗಿದ್ದ ಆಸನಗಳು ಹದಗೆಟ್ಟಿವೆ.

ಈ ಸಂಗೀತ ಕಾರಂಜಿಯನ್ನು ಪುನರುಜ್ಜೀವನ ಗೊಳಿಸಬೇಕು ಹಾಗೂ ಇದನ್ನು ಶಾಶ್ವತವಾದ ಜನಾಕರ್ಷಣೆಯ ಕೇಂದ್ರವನ್ನಾಗಿ ರೂಪಿಸಬೇಕು. ಈ ಯೋಜನೆಗಾಗಿ ಮಾಡಲಾದ ಕೋಟ್ಯಂತರ ರೂಪಾಯಿ ಹೂಡಿಕೆ ವ್ಯರ್ಥವಾಗಬಾರದು ಎಂದು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸುತ್ತಲೇ ಇದ್ದಾರೆ. ಈ ಸಂಗೀತ ಕಾರಂಜಿಯ ಪುನರುಜ್ಜೀವನಗೊಳಿಸಿದರೆ ವಿದ್ಯುತ್‌ ಬಿಲ್ ಸುಮಾರು 30 ಸಾವಿರದಿಂದ 35 ಸಾವಿರ ಸೇರಿ ಅದರ ನಿರ್ವಹಣೆಗೆ ತಿಂಗಳಿಗೆ ಏನಿಲ್ಲವೆಂದರೂ 70 ಸಾವಿರ ಖರ್ಚು ಬರುತ್ತದೆ.

ಮೈಂಟೆನೆನ್ಸ್ ಮಾಡುವ ಯೋಗ್ಯವಾಗಿರುವ ಸಮಯ ಸಿಕ್ಕಿದಾಗ ಅದನ್ನು ಮಾಡಲು ಸಾಧ್ಯವಿದೆ ಎನ್ನುತ್ತಾರೆ ಕದ್ರಿ ಪಾರ್ಕ್‌ ಸಮಿತಿಗೆ ಅಧ್ಯಕ್ಷರಾಗಿರುವ, ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಅವರು. ಲೋ ಕಾಸ್ಟ್‌ನಲ್ಲಿ ಜನರಿಗೆ ಮನೋರಂಜನೆ ನೀಡಲು ಹೇಗೆ ಸಾಧ್ಯ ಎಂದು ಚರ್ಚಿಸಿ ಎರಡು ಮೂರು ತಿಂಗಳಿನಲ್ಲಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.

ಒಟ್ಟಿನಲ್ಲಿ ಸಂಗೀತ ಕಾರಂಜಿ ನಾಟ್ಯ, ಲೇಸರ್ ಶೋ ಅಂದ ನೋಡಲು ಇಲ್ಲಿಗೆ ಆಗಮಿಸುವ ಪ್ರವಾಸಿಗರು ಕಾಯುತ್ತಿದ್ದಾರೆ. ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ಸೂಕ್ತ ನಿರ್ಧಾರ ಕೈಗೊಂಡು  ತುಕ್ಕು ಹಿಡಿದುಹೋಗುತ್ತಿರುವ ಕಾರಂಜಿ ಪಂಪುಗಳನ್ನು ಮತ್ತೆ ಸರಿಪಡಿಸಿ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಭ್ರಮವನ್ನು ಹೆಚ್ಚಿಸಬೇಕಾಗಿದೆ.