ಮಂಗಳೂರು: ಬಿಲ್ಲವ ಅಭಿವೃದ್ಧಿ ನಿಗಮಕ್ಕೆ ಐನೂರು ಕೋಟಿ ಅನುದಾನವನ್ನು ನೀಡುವುದಾಗಿ ಈಗಿನ ಸರ್ಕಾರ ಭರವಸೆ ನೀಡಿದರೂ ಚಿಕ್ಕಾಸೂ ನೀಡಿಲ್ಲ, ಈ ಸರ್ಕಾರದ ನಡೆಯನ್ನು ಕಳೆದ ಮೂರು ವರ್ಷಗಳಿಂದ ನೋಡಿದ್ದು, ನೀಡಿದ ಭರವಸೆ ಈಡೇರಿಕೆಗಾಗಿ ಕಾದಿದ್ದೇವೆ. ಇನ್ನೂ ಭರವಸೆ ಈಡೇರದಿದ್ದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಎಚ್ಚರಿಸಿದೆ.
ಈ ಬಗ್ಗೆ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಬಿಲ್ಲವ ನಿಗಮಕ್ಕಾಗಿ ಹಿಂದಿನ ಸರ್ಕಾರ ಇದ್ದಾಗ ವೇದಿಕೆ ಹೋರಾಟ ಮಾಡಿದ್ದು ಕೊನೇ ಹಂತದಲ್ಲಿ ನಿಗಮ ಘೊಷಣೆ ಮಾಡಿತ್ತು. ಈ ಈಗಿರುವ ಸರ್ಕಾರ ನಿಗಮಕ್ಕೆ ಅಧ್ಯಕ್ಷರನ್ನು ಘೋಷಿಸಿ, ಕಚೇರಿ ನಿರ್ಮಿಸಿದರೂ ಭರವಸೆಯಂತೆ ಐನೂರು ಕೋಟಿ ಬದಲು ಹಿಂದಿನ ಸರ್ಕಾರದ ಕೇವಲ ಹತ್ತು ಕೋಟಿ ಅನುದಾನ ನೀಡಿದೆ.
ಇದರಿಂದಾಗಿ ಕಳೆದ ಮೂರು ವರ್ಷಗಳಿಂದ ಒಂದೂವರೆ ಸಾವಿರ ಕೋಟಿ ಬಾಕಿಯಿದೆ. ಕಳೆದ ಮೂರು ವರ್ಷ ಸರ್ಕಾರದ ನಡೆಯನ್ನು ನೋಡಿದ್ದೇವೆ. ತಕ್ಷಣ ಬಾಕಿಯಿರುವ ಒಂದೂವರೆ ಸಾವಿರ ಕೋಟಿ ಹಾಗೂ ಮುಂದಿನ ಐನೂರು ಕೋಟಿ ಬಿಡುಗಡೆ ಮಾಡಬೇಕು, ಸಮಾಜದ ಇಬ್ಬರಿಗೆ ಸಚಿವ ಸ್ಥಾನ ನೀಡದಿದ್ದರೆ ಹೋರಾಟ ಅನಿವಾರ್ಯ ಎಂದು ತಿಳಿಸಿದರು.
ಬಿಲ್ಲವ ಸಮಾಜ 26 ಪಂಗಡಗಳ ಹೆಸರಲ್ಲಿ ರಾಜ್ಯದಲ್ಲಿ 25ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಹಿಂದೆ 15 ಶಾಸಕರು, ನಾಲ್ಕರಿಂದ ಐದು ಸಂಸದರು, ಯಾವುದೇ ಸರ್ಕಾರ ಬಂದರೂ ಇಬ್ಬರು ಸಚಿವರು ಇರುತ್ತಿದ್ದರು. ಈಗ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಮಂತ್ರಿಮಂತ್ರಿ ಮಂಡಲದಲ್ಲಿ ಸಮಾಜದ ಕನಿಷ್ಠ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು.
ಅದು ಯಾರೇ ಆದರೂ ಆಗಬಹುದು. ಇವತ್ತು ಸಮಾಜ ಜಾಗೃತ ಆಗುತ್ತಿದೆ. ಇತ್ತೀಚೆಗೆ ಟ್ಯಾಬ್ಲೋ, ಪುಸ್ತಕದ ಬಗ್ಗೆ ಹೋರಾಟ, ಮಹಿಳೆಯೊಬ್ಬರು ಸಮಾಜಕ್ಕೆ ಅವಮಾನ ಮಾಡಿದಾಗ ನಡೆದ ಹೋರಾಟ ಇವೆಲ್ಲವೂ ಸಮಾಜ ಜಾಗೃತ ಆಗುತ್ತಿರುವುದಕ್ಕೆ ಸಾಕ್ಷಿ ಎಂದು ಎಂದು ಸತ್ಯಜಿತ್ ತಿಳಿಸಿದರು.
ಪ್ರಮುಖರಾದ ಸಂದೀಪ್ ಪಂಪ್ ವೆಲ್, ಎಂ.ಕೆ.ಪ್ರಸಾದ್, ದಿನೇಶ್ ಸುವರ್ಣ ರಾಯಿ, ಲಕ್ಷ್ಮೀಶ ಸುವರ್ಣ, ನವೀನ್ ಕೋಟ್ಯಾನ್ ಹಾಗೂ ಗಣೇಶ್ ಅಮೀನ್ ಸುದ್ದಿಗೋಷ್ಠಿಯಲ್ಲಿದ್ದರು.
ಮೋದಿಗಿಂತಲೂ ಸಂಘ ಚಟುವಟಿಕೆಯಿಂದ ಗೆಲುವು
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಘ ಪರಿವಾರದ ಪ್ರಯೋಗ ಶಾಲೆ ಎಂದು ಹೇಳಲಾಗುತ್ತದೆ. ಈ ಜಿಲ್ಲೆ ಹಿಂದುತ್ವದ ಭದ್ರ ಕೋಟೆಯಾಗಲು, ಇಲ್ಲಿ ಬಿಜೆಪಿ ಗೆಲುವಿಗೆ ನೋದಿಗಿಂತಲೂ ಸಂಘ ಪರಿವಾರ ಚಟುವಟಿಕಗಳು ಕಾರಣ, ಆದರೆ ಈಗ ಸಂಘ ಸಿಂಧುತ್ವದ ಬಗ್ಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ ಎತ್ತಿದಾಗ ಶಾಸಕರು ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ, ರಾಜಕೀಯ ಲಾಭ ಪಡೆದವರೂ ಮೌನವಾಗಿದ್ದಾರೆಂದು ಸತ್ಯಜಿತ್ ಸುರತ್ಕಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಘ ಪರಿವಾರದ ಬಗ್ಗೆ ಈ ಹಿಂದೆ ಹಲವರು ಪ್ರಶ್ನೆ ಎತ್ತಿದ್ದು ಎರಡು ಬಾರಿ ನಿಷೇಧವೂ ಅಗಿತ್ತು. ಆದರೂ ಸಂಘ ಕಾರ್ಯಸೂಚಿಯಂತೆ ನಡೆಸಿಕೊಂಡು ಬಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದ್ದು, ಪ್ರಶ್ನಿಸಲೇಬಾರದು ಎನ್ನುವಂತಿಲ್ಲ. ಹಿಂದೆ ಸಂಘದ ಬಗ್ಗೆ ಪ್ರಶ್ನೆ ಎದ್ದಾಗ, ಸಂಘ ನಿಷೇಧ ಆದಾಗ ಇಡೀ ಸಮಾಜ ಉತ್ತರ ಕೊಡುತ್ತಿತ್ತು.
ಆದರೆ ಈಗ ಪ್ರಿಯಾಂಕ್ ಖರ್ಗೆ ಪ್ರಶ್ನೆ ಎತ್ತಿದಾಗ ಸಂಘ ಪರಿವಾರ ಪ್ರಯೋಗ ಶಾಲೆಯ ಶಾಸಕರೂ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ. ಸಂಘದ ಸಿದ್ಧಾಂತ ಎಲ್ಲಾ ಸಮಯಕ್ಕೂ ದೇಶ, ಸಮಾಜಕ್ಕೆ ಅನಿವಾರ್ಯ. ಇದಕ್ಕೆ ನ್ಯೂನ್ಯತೆ ಬಾರದಂತೆ ನೋಡಿಕೊಳ್ಳಲು ಸಂಘ ಪ್ರಯತ್ನಿಸಲಿದೆ. ಎಲ್ಲಾ ಪ್ರಶ್ನೆಗಳಿಗೆ ಸಂಘ ಕಾನೂನು ರೀತಿಯಲ್ಲಿ ಉತ್ತರ ನೀಡಬಹುದು. ಆದರೆ ಸಂಘದ ಬಗ್ಗೆ ಸಮಾಜದಲ್ಲೂ ಉದ್ಭವವಾಗಿರುವ ಮಾನಸಿಕತೆಯನ್ನು ಪ್ರಶ್ನಿಸುವಂತಾಗಿದೆ ಎಂದು ಸತ್ಯಜಿತ್ ಪ್ರತಿಕ್ರಿಯಿಸಿದರು.

