ಬಂಟ್ವಾಳ: ತೆಂಕುತಿಟ್ಟು ಯಕ್ಷಗಾನ ರಂಗದ ಮೇರು ಕಲಾವಿದ, ಆಟ-ಕೂಟಗಳ ಸರದಾರ, ಯಕ್ಷರಂಗದ ಸವ್ಯಸಾಚಿ ಸೂರಿಕುಮೇರು ಗೋವಿಂದ ಭಟ್ (88) ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ತೀರ್ಥಹಳ್ಳಿಯ ತಮ್ಮ ಹಿರಿಯ ಪುತ್ರನ ನಿವಾಸದಲ್ಲಿ ನಿಧನಹೊಂದಿದರು. ಅವರು ಮೂವರು ಪುತ್ರರನ್ನು ಅಗಲಿದ್ದಾರೆ.
ಯಕ್ಷಗಾನ ಕ್ಷೇತ್ರದ ‘ನಡೆದಾಡುವ ವಿಶ್ವಕೋಶ’, ‘ದಶಾವತಾರಿ’ ಎಂದೇ ಖ್ಯಾತರಾಗಿದ್ದ ಸೂರಿಕುಮೇರಿ ಕೆ. ಗೋವಿಂದ ಭಟ್ ತೆಂಕುತಿಟ್ಟು ಯಕ್ಷಗಾನ ಇದುವರೆಗೆ ಕಂಡ ಸರ್ವಶ್ರೇಷ್ಠ ಕಲಾವಿದರೆನಿಸಿಕೊಂಡಿದ್ದರು. ಅವರು ಯಕ್ಷಗಾನ ಗುರುಗಳೂ ಆಗಿದ್ದರು.
ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 70 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು, ಧರ್ಮಸ್ಥಳ ಯಕ್ಷಗಾನ ಮೇಳದ ಪ್ರಮುಖ ಕಲಾವಿದರಾಗಿ, ಒಂದೇ ಮೇಳದಲ್ಲಿ 54 ವರ್ಷಗಳಿಗೂ ಹೆಚ್ಚು ಕಾಲ ತಿರುಗಾಟ ನಡೆಸಿ ದಾಖಲೆ ಮೆರೆದವರು. ಜೊತೆಗೆ ಮೂಲ್ಕಿ, ಕೂಡ್ಲು, ಸುರತ್ಕಲ್ (ಕೆಳಗಿನ ಮಾರಿಗುಡಿ) ಇರಾ ಸೋಮನಾಥೇಶ್ವರ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ.
ಕೌರವ, ರಕ್ತಬೀಜ, ಇಂದ್ರಜಿತು, ಮಾಗಧ, ಕರ್ಣ, ಅತಿಕಾಯ ನರಕಾಸುರ, ತಾಮ್ರಾಕ್ಷ, ಹಿರಣ್ಯ ಕಶಿಪು, ದೇವೇಂದ್ರ, ಅರ್ಜುನ, ಹನುಮಂತ, ಭೀಷ್ಮ, ಬಾಹುಬಲಿ, ವಿಶ್ವಾಮಿತ್ರ ಅವರಿಗೆ ಹೆಸರು ತಂದು ಕೊಟ್ಟ ಪಾತ್ರಗಳಾಗಿವೆ. ಛಂದೋಬದ್ಧವಾದ ಮಾತಿನ ಜತೆಗೆ ನೃತ್ಯದಲ್ಲೂ ಪ್ರಾವೀಣ್ಯ ಪಡೆದಿದ್ದರು. ಅವರಿಗೆ 2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ ಪುರಸ್ಕಾರ, ಕರ್ನಾಟಕ ಜಾನಪದ ಅಕಾಡೆಮಿ ಸಾಧನಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಗೌರವ ಸನ್ಮಾನಗಳು ದೊರೆತಿವೆ.
ಮಣಿ ಮೇಖಲೆ, ಕನಕ ರೇಖೆ, ಕಾವೇರಿ ಮಹಾತ್ಮ, ಮೂರುವರೆ ವಜ್ರಗಳು ರಾಜಶೇಖರ ವಿಲಾಸ, ಮಹಾವೀರ ಸಾಮ್ರಾಟ ಅಶೋಕ, ನಹುಷೇಂದ್ರ ಎಂಬ ಏಳು ಯಕ್ಷ ಪ್ರಸಂಗಗಳನ್ನು ಅವರು ಬರೆದಿದ್ದಾರೆ. ಜಪಾನ್, ಅಬುದಾಬಿ, ಬಹ್ಮನ್, ದುಬೈಗಳಲ್ಲಿ ಅವರು ಯಕ್ಷಗಾನ ಪ್ರದರ್ಶಿಸಿದ್ದಾರೆ. ದಿಲ್ಲಿಯಲ್ಲಿ ರಾಷ್ಟ್ರಪತಿ ಎದುರು ಯಕ್ಷಗಾನ ಪ್ರದರ್ಶಿಸಿದ್ದ ಖ್ಯಾತಿ ಗೋವಿಂದ ಭಟ್ಟರಿಗಿದೆ.
ದಶಾವತಾರಿ’ ಎಂದೇ ಖ್ಯಾತಿ…:
ಯಕ್ಷಗಾನದಲ್ಲಿ ವಿವಿಧ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸಿದ್ದರಿಂದ ಅವರಿಗೆ ‘ದಶಾವತಾರ’ ಬಿರುದು ದೊರಕಿದೆ. ಧರ್ಮಸ್ಥಳ ಯಕ್ಷಗಾನ ಕೇಂದ್ರ ನಲ್ಲಿ ಗುರುವಾಗಿ ಸೇವೆ ಸಲ್ಲಿಸಿ ಅನೇಕ ಶಿಷ್ಯರನ್ನು ತಯಾರಿಸಿದ್ದಾರೆ. ಸಾಹಿತ್ಯ ಮತ್ತು ರಚನೆಯಲ್ಲೂ ಮೇಲುಗೈ ಸಾಧಿಸಿದ್ದ ಇವರು15ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಯಕ್ಷಗಾನದಲ್ಲಿ ಪಾತ್ರಾಭಿನಯ, ನೃತ್ಯ, ಸಂಭಾಷಣೆ ಎಲ್ಲದಲ್ಲೂ ನಿಪುಣತೆ,ಯುವ ಕಲಾವಿದರನ್ನು ತರಬೇತಿ ನೀಡಿ ಪರಂಪರೆಯನ್ನು ಉಳಿಸಿದರು. ಯಕ್ಷಗಾನವನ್ನು ಜನರಿಗೆ ಇನ್ನಷ್ಟು ಹತ್ತಿರ ಮಾಡಿದರು.
ಅವರು ತೆಂಕು, ಬಡಗು ಎರಡೂ ತಿಟ್ಟುಗಳಲ್ಲಿ ಯಾವುದೇ ಪಾತ್ರವನ್ನಾದರೂ ಲೀಲಾಜಾಲವಾಗಿ ಮಾಡಬಲ್ಲವರಾಗಿದ್ದರು. ಅನಿವಾರ್ಯ ಸ್ಥಿತಿಯಲ್ಲಿ ಭಾಗವತ, ಚೆಂಡೆಗಾರ, ಮದ್ದಳೆಗಾರನಾಗಿಯೂ ಹಿಮ್ಮೇಳದಲ್ಲಿ ಕೆಲಸ ನಿಭಾಯಿಸಿದ್ದರು. ಮೇಳದ ಮ್ಯಾನೇಜರ್ಇಲ್ಲದ ಕಾಲದಲ್ಲಿ ಮ್ಯಾನೇಜರ್ಆಗಿಯೂ ಕಾರ್ಯವಹಿಸಿದ್ದರು. ಅವರೊಬ್ಬ ಸರ್ವಾಂಗೀಣ ಪರಿಪೂರ್ಣ ಕಲಾವಿದ. ನಾಯಕ, ಪ್ರತಿನಾಯಕ, ರಕ್ಕಸ, ರಕ್ಕಸಿ, ಹಾಸ್ಯ, ಮಂತ್ರಿ, ಪುಂಡುವೇಷ ಹೀಗೆ ಎಲ್ಲ ವೇಷಗಳನ್ನು ಲೀಲಾಜಾಲವಾಗಿ ನಿಭಾಯಿಸಿದ್ದ ಯಕ್ಷರಂಗದ ಸವ್ಯಸಾಚಿ.

