ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವಾಗಿ ಮಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸುದ್ದಿಗೋಷ್ಟಿ ನಡೆಸಿದರು. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೀತಾ ಇದೆ. ಕೃತ್ಯದಲ್ಲಿ ಭಾಗವಹಿಸಿದ ಎಂಟು ಜನರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅವರೆಲ್ಲರೂ ಈಗ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ ಎಂದರು.

ಅವರ ಹಿನ್ನೆಲೆ ಮತ್ತು ಹೆಸರು ಮಂಗಳೂರು ಕಮಿಷನರ್ ತಿಳಿಸ್ತಾರೆ. ದ.ಕ ಮತ್ತು ಉಡುಪಿ ಜಿಲ್ಲೆ ಸುಮಾರು ವರ್ಷಗಳಿಂದ ಕೋಮುವಾದದ ಹಿನ್ನೆಲೆಯಲ್ಲಿ ರಾಜ್ಯ,ರಾಷ್ಟ್ರದ ಗಮನ ಸೆಳೆದಿದೆ. ಈ ಬಾರಿ ಕೂಡ ಈ ಘಟನೆ ಆದ ಮೇಲೆ ಉಭಯ ಜಿಲ್ಲೆಗಳಿಗೆ ಇದು ಮರುಕಳಿಸಿದ ಭಾವನೆ ಬಂದಿದೆ. ಆದರೆ ಜನ ಸಮುದಾಯ ಇದನ್ನ ಇಷ್ಟ ಪಡಲ್ಲ ಎಂದರು.

ಪೊಲೀಸ್ ಇಲಾಖೆ ಮತ್ತು ಸರ್ಕಾರ ಜನರ ಶಾಂತಿ ಬಯಸ್ತಾರೆ. ಸರ್ಕಾರ ಇಲ್ಲಿನ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದೆ. ಆದರೆ ಈ ಘಟನೆ ಮತ್ತು ನಾಲ್ಕು ದಿನದ ಹಿಂದಿನ ಅಶ್ರಫ್ ಕೊಲೆ ಮತ್ತೆ ಇಲ್ಲಿ ಕೋಮು ಸೌಹಾರ್ದಕ್ಕೆ ಸವಾಲಾಗಿದೆ. ಸುಹಾಸ್ ಶೆಟ್ಟಿ ಕೇಸ್ ನಲ್ಲಿ ಎಂಟು ಜನರು‌ ಹಾಗೂ ಅಶ್ರಫ್ ಕೇಸ್ ನಲ್ಲಿ 21 ಜನರ ಬಂಧನ ಆಗಿದೆ ಎಂದರು.

ನಾವು ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಶಾಂತಿ ಹಾಳು ಮಾಡಲು ಬಿಡಲ್ಲ. ಯಾವುದೇ ಸಮುದಾಯಕ್ಕೂ ಕಾನೂನು ಉಲ್ಲಂಘನೆ ಮಾಡಲು ಬಿಡಲ್ಲ. ರಾಜ್ಯ,ರಾಷ್ಟ್ರದ ಕಾನೂನು ಚೌಕಟ್ಟಿನಲ್ಲಿ ಕ್ರಮ ತೆಗೋತಿವಿ. ಈ ಭಾಗ ಶಾಂತಿಯಿಂದ ಇರಬೇಕು ಎನ್ನುವುದು ನಮ್ಮ‌ ಉದ್ದೇಶ. ಈ ಹಿಂದೆ ಶಾಂತಿಗಾಗಿ ಪಕ್ಷದ ವತಿಯಿಂದ ನಾವು ಸಮಾವೇಶ,ಪಾದಯಾತ್ರೆ ಕೂಡ ಮಾಡಿದ್ದೇವು. ಈಗ ಇದು‌ ಮರುಕಳಿಸಿರೋದ್ರ ಹಿಂದೆ ಕೆಲವು ಶಕ್ತಿಗಳಿವೆ ಎಂದರು.

ಆ ಶಕ್ತಿಗಳನ್ನು ಕೂಡ ನಾವು ಹುಟ್ಟಡಗಿಸುತ್ತೇವೆ. ಸರ್ಕಾರ ಈ ಬಗ್ಗೆ ಒಂದು ತೀರ್ಮಾನಕ್ಕೆ ಬಂದಿದೆ. ಇನ್ನು ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಹೊಸತಾಗಿ ಆಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್ ರಚಿಸಲು ನಿರ್ಧಾರ. ಆಂಟಿ ನಕ್ಸಲ್ ಫೋರ್ಸ್ ಮಾದರಿಯಲ್ಲೇ ಆಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್ ಇರುತ್ತೆ, ಪೊಲೀಸರಿಗಿಂದ ವಿಭಿನ್ನವಾಗಿ ಈ ಫೋರ್ಸ್ ಕೆಲಸ ಮಾಡಲಿದೆ ಎಂದರು.

ಕೋಮು ಗಲಭೆ ಮಾಡೋರು ಹಾಗೂ ಬೆಂಬಲಿಸೋರ ಮೇಲೆ ಈ ಫೋರ್ಸ್ ಕ್ರಮ ಕೈಗೊಳ್ಳುತ್ತೆ, ಕಾನೂನಿನ ಅಡಿಯಲ್ಲಿ ಈ ಫೋರ್ಸ್ ರಚನೆ ಮಾಡಿ ಅವರಿಗೆ ಅಧಿಕಾರ ಕೊಡ್ತೇವೆ. ಇನ್ನು‌ ಮೇಲೆ ಪ್ರಚೋದನಕಾರಿ ಭಾಷಣ ಮಾಡಿದ್ರೆ ಅಂಥವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಿದ್ದೇನೆ. ಐಜಿಪಿ ನೇತೃತ್ವದಲ್ಲಿ ಈ ಫೋರ್ಸ್ ಕೆಲಸ ಮಾಡ್ತದೆ ಎಂದರು.