ಪುತ್ತೂರು: ಹೃದಯ ಭಾಗದಲ್ಲಿ ಕಾರ‍್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನ ಹಾಸ್ಟೆಲ್ ವಿದ್ಯಾರ್ಥಿಗಳು ಡಿಸೆಂಬರ್ 24ರಂದು ಬೀರುಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿರುವ ಮಾನಸಿಕ ಅಸ್ವಸ್ಥರೊಂದಿಗೆ ಸಮಯವನ್ನು ಕಳೆಯುವ ಮೂಲಕ ಅವರ ಜೊತೆಗೆ ಇದ್ದು, ಅವರಿಗೆ ಸಂತಸ ನೀಡಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ಶ್ರೀಯುತ ಗೋಕುಲ್‌ನಾಥ್ ಪಿ.ವಿ. ಇವರು ಮಾತನಾಡುತ್ತಾ ಇನ್ನು ಮುಂದಿನ ದಿನಗಳಲ್ಲಿ ಪ್ರತಿವರ್ಷವು ಇಲ್ಲಿಗೆ ಬಂದು ಇಲ್ಲಿರುವವರೊಂದಿಗೆ ಅವರ ಅಗತ್ಯತೆಗಳನ್ನು ಪೂರೈಸುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.

ನಿವೃತ್ತ ಮುಖ್ಯಗುರು ಅಂಕಣಕಾರರು ಆದ ನಾರಾಯಣ ರೈ ಕುಕ್ಕುವಳ್ಳಿ ಇವರು ಮಾತನಾಡುತ್ತಾ ಇದು ದೇವರ ಮನೆ ದೇವರನ್ನು ಪೂಜಿಸುವ ಬದಲು ನಾವು ಇಂತಹ ವ್ಯಕ್ತಿಗಳ ಜೊತೆ ಸಮಯ ಕಳೆದು ಇವರಲ್ಲಿ ದೇವರನ್ನು ಕಾಣಬೇಕು ಎಂದು ತಿಳಿಸಿದರು. ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಶೌರ್ಯ ಪೂಣಚ್ಚ ಹಾಗೂ ಹೀತೇಶ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಆಶ್ರಮದಲ್ಲಿರುವರು ತಮ್ಮಲ್ಲಿರುವ ಕಲೆಗಳನ್ನು ವಿದ್ಯಾರ್ಥಿಗಳ ಮುಂದೆ ಪ್ರಸ್ತುತಪಡಿಸಿದರು. ಹಾಸ್ಟೆಲ್ ವಾರ್ಡನ್‌ಗಳಾದ ಚಂದ್ರಶೇಖರ್, ಅಭಿಷೇಕ್, ಶ್ರೀ ಪ್ರಗತಿವಿಸ್ತಾರ ಎವಿಯೇಷನ್ ಆ್ಯಂಡ್ ಮ್ಯಾನೇಜ್‌ಮೆಂಟ್ ಇದರ ಉಪನ್ಯಾಸಕರಾದ ಅರುಣ್ ಜೋಶ್ ಇವರು ಉಪಸ್ಥಿತರಿದ್ದರು. ಪ್ರಜ್ಞಾ ಆಶ್ರಮದಲ್ಲಿ ಸುಮಾರು 15 ಮಾನಸಿಕ ಅಸ್ವಸ್ಥರಿದ್ದು ಅವರ ಬೇಕು ಬೇಡಗಳನ್ನು ನೋಡಿಕೊಳ್ಳುವ ಕೆಲಸವನ್ನು ಸುಮಾರು 8 ವರ್ಷದಿಂದ ಅಣ್ಣಪ್ಪ ಹಾಗೂ ಜ್ಯೋತಿ ದಂಪತಿಗಳು ಮಾಡುತ್ತಿದ್ದಾರೆ.

ಇವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ವಿದ್ಯಾರ್ಥಿಗಳ ವತಿಯಿಂದ ಆಶ್ರಮಕ್ಕೆ ಗ್ರೈಂಡರ್‌ನ್ನು ಕೊಡುಗೆಯಾಗಿ ನೀಡಲಾಯಿತು. ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಒದಗಿಸಿಕೊಡಲಾಯಿತು. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳ ಅರಿವು ಮೂಡಿಸುವ ಕೆಲಸವನ್ನು ಮಾಡಲಾಯಿತು.

