ಹಬ್ಬದ ಕಾರ್ಯಕ್ರಮ ಹಾಗೂ ಮೆರವಣಿಗೆ ಆಯೋಜಿಸಲು ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು. ಖಾಸಗಿ ಜಾಗದಲ್ಲಿ ಕಾರ್ಯಕ್ರಮ ನಡೆಸುವುದಾದರೆ ಮಾಲೀಕರ ಎನ್‌ಒಸಿ ಅಗತ್ಯವಾಗಿದೆ.
ಡಿಜೆ, ಅತೀ ಹೆಚ್ಚಿನ ಶಬ್ದದ ಸ್ಪೀಕರ್‌ಗಳಿಗೆ ಸಂಪೂರ್ಣ ನಿಷೇಧವಿದ್ದು, ಅನುಮತಿಯೊಂದಿಗೆ ಬಳಸುವ ಧ್ವನಿವರ್ಧಕಗಳನ್ನು ರಾತ್ರಿ 10 ಗಂಟೆಯೊಳಗೆ ಬಂದ್ ಮಾಡಬೇಕು. ಯಾವುದೇ ಮೆರವಣಿಗೆ ರಾತ್ರಿ 11.30ರ ಬಳಿಕ ನಡೆಸುವಂತಿಲ್ಲ. ನಿಗದಿತ ಮಾರ್ಗ ಅಥವಾ ಸ್ಥಳ ಬದಲಾವಣೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಕಾರ್ಯಕ್ರಮ ಸ್ಥಳಗಳಲ್ಲಿ 24×7 ಭದ್ರತೆ ಹಾಗೂ ಸಿಸಿಟಿವಿ ಕಡ್ಡಾಯ. ಸಿಸಿಟಿವಿ ದೃಶ್ಯಗಳನ್ನು ಕನಿಷ್ಠ 30 ದಿನ ಸಂಗ್ರಹಿಸಬೇಕು. ಧಾರ್ಮಿಕ ಭಾವನೆ ಕೆರಳಿಸುವ ಘೋಷಣೆ, ಬ್ಯಾನರ್ ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಈವ್ ಟೀಸಿಂಗ್, ಹಿಂಬಾಲಿಸುವುದು ಹಾಗೂ ಲೈಂಗಿಕ ಕಿರುಕುಳಕ್ಕೆ ಶೂನ್ಯ ಸಹಿಷ್ಣುತೆ ಇರಲಿದೆ.
ತುರ್ತು ಸೇವೆ, ಅಗ್ನಿಶಾಮಕ ವ್ಯವಸ್ಥೆ, ಪ್ರಥಮ ಚಿಕಿತ್ಸೆ, ಸಂಚಾರ ನಿಯಂತ್ರಣ ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಆಯೋಜಕರು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ BNS ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ. ಸಹಾಯಕ್ಕಾಗಿ 112ಕ್ಕೆ ಕರೆ ಮಾಡುವಂತೆ ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

