ಮಂಗಳೂರು: ಸ್ಥಳೀಯವಾಗಿ ಮತ್ತು ಹೊರ ದೇಶಗಳಲ್ಲಿ ಕುಳಿತು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷ, ಮುಸ್ಲಿಮರಲ್ಲಿ ಅಭದ್ರತೆ ಮೂಡುವಂತಹ ವದಂತಿಗಳನ್ನು ಹರಡುವ ಕೆಲಸ ಕೆಲವು ಮಂದಿಯ ತಂಡದಿಂದ ನಡೆಯುತ್ತಿದೆ. ಅವರ ಗುರಿಯೇ ಕೋಮು ದ್ವೇಷವನ್ನು ಹರಡುವುದಾಗಿದೆ. ಈ ವಿಚಾರವನ್ನು ಪೊಲೀಸ್‌ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಂತಹವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ರೆಡ್ಡಿ ತಿಳಿಸಿದ್ದಾರೆ.

ಮೂಡು ಬಿದಿರೆಯಲ್ಲಿ ಸಂಸ್ಥೆಯೊಂದರ ಕಾರ್ಯಕ್ರಮದ ವೇಳೆ ಪೊಲೀಸರು ದಾಳಿ ಮಾಡಿ ಅಲ್ಲಿನ ಅಡುಗೆಯನ್ನು ಪರಿಶೀಲನೆ ನಡೆಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ರವಾನಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಈ ಘಟನೆಯ ಬಗ್ಗೆ ಈಗಾಗಲೇ ಸಂಬಂಧಪಟ್ಟ ಸಂಸ್ಥೆಯವರು ಸ್ಪಷ್ಟೀಕರಣ ನೀಡಿದ್ದಾರೆ. ಕಳೆದ ಸುಮಾರು 10 ದಿನಗಳಿಂದ ಇಂತಹ ಬೆಳವಣಿಗೆಗಳು ನಡೆಯುತ್ತಿದ್ದು, ಹಳೆಯ ಘಟನೆಗಳು ಅಥವಾ ನಿತ್ಯ ನಡೆಯುವ ಕೆಲವು ಸಂಗತಿಗಳನ್ನು ದೊಡ್ಡದಾಗಿ ಬಿಂಬಿಸುವ, ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಹಬ್ಬಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅವರದ್ದೇ ಗುಂಪಿನಲ್ಲಿರುವ ಜಾತ್ಯತೀತ ಹಿಂದೂಗಳು ಅಥವಾ ಮುಸ್ಲಿಮರು ನಮಗೆ ಮಾಹಿತಿ ನೀಡುತ್ತಾರೆ ಎನ್ನುವ ವಿಚಾರ ಅವರಿಗೆ ತಿಳಿದಿಲ್ಲ. ಹಾಗಾಗಿ ಇಂತಹ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.