ಮಂಗಳೂರು: ಕೊಡಿಯಾಲ್ಬೈಲ್ನ ದಿ ಓಶಿಯನ್ ಪರ್ಲ್ ಹೊಟೇಲ್ನ ಸಭಾಂಗಣದಲ್ಲಿ “ಸ್ಪೆಕ್ಟಮ್ – 2026” ಒಂದು ದಿನದ ಹೃದ್ರೋಗ ಸಮ್ಮೇಳನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಂಗಳೂರಿನ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ’ಸ್ಪೆಕ್ಟಮ್’ ಒಂದು ದಿನದ ಹೃದ್ರೋಗ ಸಮ್ಮೇಳನಕ್ಕೆ ಗಣ್ಯರಿಂದ ಚಾಲನೆ ಸಿಕ್ಕಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ನವದೆಹಲಿಯ ಎನ್ಎಂಸಿ ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಮಂಡಳಿಯ ಅಧ್ಯಕ್ಷರಾದ ಡಾ|ಎಂ.ಕೆ.ರಮೇಶ್, ಕಾರ್ಯಾಗಾರದ ಮೂಲಕ ಜ್ಞಾನವನ್ನು ವೃದ್ಧಿಸಲು ಸಾಧ್ಯ, ಪ್ರಸ್ತುತ ದಿನಗಳಲ್ಲಿ ತಾಂತ್ರಿಕ ವರ್ಗಕ್ಕೆ ಹೆಚ್ಚಿನ ಒತ್ತು ನೀಡಬೇಕು. ಹೊಸ ಹೊಸ ತಂತ್ರಜ್ಞಾನಗಳ ಬೆಳವಣಿಗೆ ಆಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಜೆ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ| ಎಜೆ.ಶೆಟ್ಟಿ ಅವರು, 2012ರಲ್ಲಿ ಆರಂಭವಾದ ಈ ಸಮ್ಮೇಳನವು ಇದೀಗ 15ನೇ ಆವೃತ್ತಿಯಾಗಿದೆ. ಹಲವಾರು ಮಂದಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ, ಕಾರ್ಯಾಗಾರದಲ್ಲಿ ಸಾಕಷ್ಟು ಮಾಹಿತಿಯನ್ನು ನೀಡುತ್ತಿದ್ದಾರೆ. ಇದನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂದರು.
ಇದೇ ವೇಳೆ ಡಾ ಎಂ.ಕೆ. ರಮೇಶ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.ಈ ವೇಳೆ ಸಂಘಟನ ಅಧ್ಯಕ್ಷರಾದ ಡಾ| ಬಿ.ವಿ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಡಾ| ಪುರುಷೋತ್ತಮ, ಸಲಹೆಗಾರ ಡಾ| ಅಶೋಕ್ ಹೆಗಡೆ,ಡಾ| ಪ್ರಶಾಂತ್ ಮಾರ್ಲ, ಡಾ.ಅಮಿತಾ ಪಿ ಮಾರ್ಲ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

2012ರಿಂದ ಆರಂಭವಾದ ಈ ಸಮ್ಮೇಳನವು ಇಂದು 15ನೇ ಆವೃತ್ತಿಯಾಗಿದೆ. ಕರ್ನಾಟಕ ಹಾಗೂ ನೆರೆಯ ರಾಜ್ಯಗಳಿಂದ ಸುಮಾರು 250 ಪ್ರತಿನಿಧಿಗಳು, ಇದರಲ್ಲಿ ಹೃದ್ರೋಗ ತಜ್ಞರು, ವೈದ್ಯರು, ಹೃದ್ರೋಗ ಮತ್ತು ವೈದ್ಯಕೀಯ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಹೃದ್ರೋಗ ಕ್ಷೇತ್ರದ ವಿವಿಧ ವಿಷಯಗಳ ಕುರಿತು ಉಪನ್ಯಾಸಗಳು, ಚರ್ಚೆಗಳು ಮತ್ತು ಸಂವಾದಾತ್ಮಕ ಅಧಿವೇಶ ನಡೆದವು.

