ಮಂಗಳೂರು: ಮಳೆರಾಯನ ಆರ್ಭಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ಬಲಿಯಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ವಿಶೇಷ ಸಭೆ ನಡೆಸಲಾಯಿತು. ದಕ್ಷಿಣ ಕನ್ನಡ ಮಳೆಹಾನಿ ಕುರಿತು ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದರು. ಉಳ್ಳಾಲ ಕ್ಷೇತ್ರ ಹಾಗೂ ಮಂಗಳೂರಿನಲ್ಲಿ ಹೆಚ್ಚು ಮಳೆ ಹಾನಿಯಾಗಿದೆ.

ಮೊಂಟೆಪದವಿನಲ್ಲಿ ಒಂದೆ ಕುಟುಂಬದ ಮೂವರು ತೀರಿ ಹೋಗಿದ್ದಾರೆ. ಬದುಕುಳಿದ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ. ಮಹಿಳೆ ಅಶ್ವಿನಿ ಪರಿಸ್ಥಿತಿಯೂ ಗಂಭೀರವಾಗಿದೆ. ಇದು ಅತೀ ದೊಡ್ಡ ಕೆಟ್ಟ ದುರ್ಘಟನೆ ಎಂದರು. ಕಾಂಪೌಂಡ್ ಕುಸಿದು ಬಿದ್ದು ಮೃತಪಟ್ಟ ಬಾಲಕಿ ನಯಿಮಾ ಕುಟುಂಬದವರನ್ನು ಭೇಟಿ ಮಾಡಿದ್ದೇವೆ. ಮೃತಪಟ್ಟಿರುವ ಕುಟುಂಬದವರಿಗೆ ಪರಿಹಾರ ಕೊಡುವ ಕೆಲಸ ಮಾಡಿದ್ದೇವೆ ಎಂದರು.

ಮುಂಜಾಗೃತ ಕ್ರಮ ಕೈಗೊಳ್ಳಿ ಎಂದು ಈ ಹಿಂದೆಯೇ ಹೇಳಿದ್ದೇವೆ. ಜಮೀನು, ಭೂಮಿ ಅಭಿವೃದ್ಧಿ ಮಾಡುವಾಗ ಎಚ್ಚರಿಕೆ ಮಾಡಬೇಕು. ಎಚ್ಚರಿಕೆ ಇಲ್ಲದ ಕಾರಣ ಈ ರೀತಿಯಾಗಿದೆ. ಅವೈಜ್ಞಾನಿಕವಾಗಿ ಬೆಟ್ಟ ಗುಡ್ಡ ಅಗೆಯುವಾಗ ಕುಸಿತವಾಗುತ್ತೆ. ಭೂಕುಸಿತದಿಂದ ಈ ರೀತಿಯಾಗುತ್ತಿದೆ. ಇಲಾಖೆಯಿಂದ ಕ್ರಮ ವಹಿಸಲು ಸೂಚಿಸಲಾಗುತ್ತದೆ ಎಂದರು.