ಮಂಗಳೂರು : ಪಾಲಿಕೆಯ ಜನನ-ಮರಣ ಪ್ರಮಾಣ ಪತ್ರ ವಿತರಣೆ ವಿಭಾಗಕ್ಕೆ ಎಸ್‌ಐಆರ್ ಪ್ರಕ್ರಿಯೆಯಿಂದ ಬಿಸಿ ತಟ್ಟಿದೆ. ಜಿಲ್ಲೆ, ಹೊರ ಜಿಲ್ಲೆಯಿಂದ ಪ್ರಮಾಣ ಪತ್ರಕ್ಕಾಗಿ ಜನ ಪಾಲಿಕೆಗೆ ಆಗಮಿಸಿ ಬರಿಗೈಯಲ್ಲೇ ಮರಳುವಂತಾಗಿದೆ.
ಶಾಲೆ ಕಾಲೇಜು ಆರಂಭಗೊಂಡ ಕಾರಣ ಶಾಲೆಗಳಿಗೆ ಜನನ ಪ್ರಮಾಣ ಪತ್ರ ಅಗತ್ಯವಾಗಿದೆ. ಮಂಗಳೂರು ನಗರದ ವಿವಿಧ ಆಸ್ಪತ್ರೆಗಳಲ್ಲಿ ಜನಿಸಿದ ಮಕ್ಕಳ ಜನನ ಪ್ರಮಾಣ ಪತ್ರ ಹಾಗೂ ಮೃತರಾದವರ ಮರಣ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವವರು ಹೆಚ್ಚಿದ್ದಾರೆ. ಕೆಲವು ದಿನಗಳಿಂದ ಕೌಂಟರ್ ಸಂಪೂರ್ಣ ಬಂದ್ ಆಗಿತ್ತು.
ನೂರಾರು ಮಂದಿ ಪಾಲಿಕೆ ಕಚೇರಿಗೆ ಆಗಮಿಸಿ ಹಿಂದಿರುಗಿದ್ದಾರೆ. ಇದೀಗ ಮಧ್ಯಾಹ್ನದ ವರೆಗೆ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು ಬೆಳಗ್ಗೆಯಿಂದಲೇ ಸರತಿ ಸಾಲು ಕಂಡು ಬರುತ್ತಿದೆ. ವಯೋವೃದ್ಧರು, ಮಹಿಳೆಯರು, ಪುಟ್ಟ ಕಂದಮ್ಮಗಳನ್ನು ಹಿಡಿದ ತಾಯಂದಿರು ಸರತಿ ಸಾಲಲ್ಲಿ ಕಾಯುವಂತಾಗಿದೆ. ಅರ್ಜಿ ತೆಗೆದುಕೊಂಡರೂ ಪ್ರಮಾಣ ಪತ್ರಕ್ಕೆ ಅವಸರ ಮಾಡಬಾರದೆಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ.
ಸಾಮಾನ್ಯವಾಗಿ 15ರಿಂದ 20 ದಿನಗಳಲ್ಲಿ ಪ್ರಮಾಣ ಪತ್ರಗಳು ಸಿಗುತ್ತಿದ್ದವು. ಆದರೆ, ಇದೀಗ ಒಂದೆರಡು ತಿಂಗಳಾದರೂ ಪ್ರಮಾಣ ಪತ್ರ ಸಿಗುತ್ತಿಲ್ಲ. ಪ್ರಮಾಣ ಪತ್ರ ಸಿದ್ಧವಾದಾಗ ಮೊಬೈಲ್‌ಗೆ ಸಂದೇಶ ಬರುತ್ತದೆ ಎನ್ನುತ್ತಾರೆ. ಆದರೆ, ತಿಂಗಳು ಕಳೆದರೂ ಯಾವುದೇ ಸಂದೇಶ ಬರದೇ ಇರುವುದರಿಂದ ರಶೀದಿಯೊಂದಿಗೆ ಕಚೇರಿಗೆ ಜನ ಆಗಮಿಸುತ್ತಿದ್ದು, ಪ್ರಮಾಣ ಪತ್ರ ಸಿಗುತ್ತಿಲ್ಲ. ಒಂದು ತಿಂಗಳಿನಿಂದ ಸ್ವೀಕರಿಸಲಾದ ಅರ್ಜಿಗಳು ಕಚೇರಿಯಲ್ಲಿ ರಾಶಿಯಾಗಿದ್ದು, ಪ್ರಮಾಣ ಪತ್ರಗಳು ವಿಲೇವಾರಿಯಾಗಿಲ್ಲ. ಎಸ್‌ಐಆರ್‌ಗೆ ಸಿಬಂದಿ ನಿಯೋಜನೆಯಿಂದ ಸಮಸ್ಯೆಯಾಗಿ ಪರಿಣಮಿಸಿದೆ.
ಜನನ-ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಮತ್ತೆ ಪ್ರಮಾಣ ಪತ್ರಕ್ಕೆ ಕಚೇರಿಗೆ ಬರಬೇಕೆಂದಿಲ್ಲ. ಅದರ ಬದಲು ಪೋಸ್ಟಲ್ ಮೂಲಕವೇ ಪ್ರಮಾಣ ಪತ್ರ ಕಳುಹಿಸಲು ಕಚೇರಿಯಲ್ಲೇ ವಿವರ ಭರ್ತಿ ಮಾಡಿ ನೀಡಿ ಎಂದು ನೊಟೀಸ್ ಹಾಕಲಾಗಿದೆ. ಆದರೆ, ಆ ಸೇವೆ ಸದ್ಯ ಲಭ್ಯವಿಲ್ಲ. ಪ್ರಮಾಣ ಪತ್ರ ಪಡೆಯಲು ಮತ್ತೆ ಕಚೇರಿಗೆ ಬರಲೇ ಬೇಕಾಗಿದೆ.

