ಮಂಗಳೂರು: ಹಿರಿಯ ಪತ್ರಕರ್ತರಾದ ಪರಮಾನಂದ.ವಿ. ಸಾಲ್ಯಾನ್ ಇಂದು ಮುಂಜಾನೆ ನಿಧನರಾಗಿದ್ದಾರೆ. ಮುಂಗಾರು, ಹೊಸದಿಗಂತ ಪತ್ರಿಕೆಗಳಲ್ಲಿ ವೃತ್ತಿ ನಿರ್ವಹಿಸಿದ್ದ ಪರಮಾನಂದರು ನಾಟಕ ರಚನಾಕಾರರಾಗಿ, ರಂಗ ನಿರ್ದೇಶಕರಾಗಿ, ತುಳು ಜನಪದ ತಜ್ಞರಾಗಿ ಪ್ರಸಿದ್ದಿ ಪಡೆದಿದ್ದರು.

ಪರಮಾನಂದ ಸಾಲ್ಯಾನ್ ಅವರು ಪತ್ರಿಕೆಗಳಲ್ಲಿ ದುಡಿಯುವುದರ ಜೊತೆಗೆ “ಅಜೇಯ” ಎಂಬ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿದ್ದರು. “ಮುಂಗಾರು” ಪತ್ರಿಕೆಯಲ್ಲಿರುವಾಗ ರಂಗಭೂಮಿ ಚಟುವಟಿಕೆಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದರು. ಮುಂಗಾರು ಪತ್ರಿಕೆಯ ಬಳಿಕ ಬೆಂಗಳೂರಿನಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ದುಡಿಯುವ ಅವಕಾಶ ಅವರಿಗೆ ಕೊನೆಗಳಿಗೆಯಲ್ಲಿ ತಪ್ಪಿಹೋಯಿತು‌ ಇದರ ಬಗ್ಗೆ ಅವರು ಯಾವಾಗಲೂ ಹೇಳಿಕೊಳ್ಳುತ್ತಿದ್ದರು.

ತದನಂತರ ಹೊಸದಿಂಗತ ಪತ್ರಿಕೆಗೆ ಸೇರಿಕೊಂಡು ಕ್ರೀಡಾ ವಿಭಾಗದ ಮುಖ್ಯಸ್ಥರಾಗಿದ್ದರು. ನಾಟಕ ರಚನೆ, ನಿರ್ದೇಶನದ ಜೊತೆಗೆ ಸಂಘಸಂಸ್ಥೆಗಳಿಗೆ ತೆರಳಿ ನಿರ್ದೇಶನ ನೀಡುತ್ತಿದ್ದರು. ಎರಡು ವಾರಗಳ ಹಿಂದೆ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಪದಾಧಿಕಾರಿಗಳು ಅವರ ಮನೆಗೆ ತೆರಳಿ ಸನ್ಮಾನಿಸಿದ್ದರು. ಕಳೆದ ಒಂದು ವರ್ಷಗಳಿಂದ ಅವರು ಅನಾರೋಗ್ಯದಿಂದ ಇದ್ದರು. ಇಂದು ಬೆಳಿಗ್ಗೆ ಪರಮಾನಂದ ಸಾಲ್ಯಾನ್ ಅವರು ಆಸ್ಪತ್ರೆಯಲ್ಲಿ ನಿಧನ‌ ಹೊಂದಿದರು.