ಮಂಗಳೂರು: ಸೀ ಬ್ರಿಜ್ ಮ್ಯಾರಥಾನ್ ಇದೆಯೆಂಬ ಹೆಸರಿನಲ್ಲಿ ನಕಲಿ ಪೋಸ್ಟ್ ಒಂದನ್ನು ಜಾಲತಾಣದಲ್ಲಿ ಹರಿಯ ಬಿಡಲಾಗಿದ್ದು ಸೈಬರ್ ವಂಚಕರದ್ದೇ ಜಾಲ ಎನ್ನುವ ಶಂಕೆ ವ್ಯಕ್ತವಾಗಿದೆ.
ಮಂಗಳೂರಿನಲ್ಲಿ ಏಪ್ರಿಲ್ 19ರಂದು ಬೆಳಗ್ಗೆ ಸೀ ಬ್ರಿಜ್ ಹೆಸರಲ್ಲಿ ಮ್ಯಾರಥಾನ್ ಇದೆಯೆಂದು ಜಾಲತಾಣದಲ್ಲಿ ಪೋಸ್ಟ್ ಹಾಕಲಾಗಿದೆ. 5 ಕಿಮೀ ಓಟಕ್ಕೆ 5 ಲಕ್ಷ ಬಹುಮಾನ, 10 ಕಿಮೀಗೆ 3.5 ಲಕ್ಷದ ಆಫರ್ ನೀಡಿದ್ದು 21 ಕಿಮೀ ಓಟಕ್ಕೆ 5 ಲಕ್ಷದ ಬಹುಮಾನ ಆಫರ್ ನೀಡಿರುವ ಬಗ್ಗೆ ತಿಳಿಸಲಾಗಿದೆ. ಮ್ಯಾರಥಾನಲ್ಲಿ ಪಾಲ್ಗೊಳ್ಳಲು ಮೊದಲೇ ರಿಜಿಸ್ಟರ್ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಆದರೆ ಮಂಗಳೂರಿನಲ್ಲಿ ಅಂತಹ ಯಾವುದೇ ಮ್ಯಾರಥಾನ್ ಆಯೋಜಿಸಿರುವುದು ನಡೆದಿಲ್ಲ.
ಹೀಗಾಗಿ ಜಾಲತಾಣದಲ್ಲಿ ಫೇಕ್ ಪೋಸ್ಟರ್ ಕೊಟ್ಟು ಸೈಬರ್ ವಂಚನೆಗೆ ಗಾಳ ಹಾಕಿರುವ ಶಂಕೆಯಿದ್ದು ರಿಜಿಸ್ಟರ್ ಮಾಡಿದರೆ ಮೊಬೈಲ್ ಹ್ಯಾಕ್ ಆಗಿ ಹಣ ಕಳಕೊಡ್ತೀರಾ..! ಜಾಗ್ರತೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ವಾರ್ನಿಂಗ್ ನೀಡಿದ್ದಾರೆ. ಫೇಕ್ ಪೋಸ್ಟರ್ ಹಾಕಿ ಮೊಬೈಲ್ ಹ್ಯಾಕ್ ಮಾಡಿ ಹಣ ಕೀಳುವ ಪೋಸ್ಟರ್ ಇದೆಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ಸದ್ಯ ಮಂಗಳೂರಿನಲ್ಲಿ ಬಿಗ್ ಮ್ಯಾರಥಾನ್ ಇದೆಯೆಂಬ ಹೆಸರಲ್ಲಿ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೇ ವೇಳೆ ಅದೇ ಮಾದರಿಯ ವಿಡಿಯೋ ಒಂದನ್ನು ಹರಿಯಬಿಡಲಾಗಿದ್ದು ಅದಕ್ಕೆ ಕಾಂತಾರ ಸಿನಿಮಾದ ಸಾಂಗನ್ನು ಹಿನ್ನೆಲೆಯಲ್ಲಿ ತೋರಿಸಿ ಕರಾವಳಿ ಜನರನ್ನು ಸತ್ಯವೆಂದು ನಂಬಿಸಿ ಯಾಮಾರಿಸುವ ರೀತಿ ಬಿಂಬಿಸಲಾಗಿದೆ.
ಸೈಬರ್ ವಂಚಕರು ಈ ರೀತಿಯೂ ಜಾಲ ಬೀಸುತ್ತಿದ್ದಾರೆಯೇ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಅದರಲ್ಲಿ ಕೊಟ್ಟಿರುವ ನಂಬರಿಗೆ ಫೋನಾಯಿಸಿದರೆ ಹಿಂದಿಯಲ್ಲಿ ಮಾತನಾಡುವ ವ್ಯಕ್ತಿ ಕರೆ ಸ್ವೀಕರಿಸುತ್ತಿದ್ದು ರಿಜಿಸ್ಟರ್ ಮಾಡಿಕೊಳ್ಳಲು ಹೇಳುತ್ತಾನೆ. ಆದರೆ ರಿಜಿಸ್ಟರ್ ಮಾಡಿದರೆ ಮೊಬೈಲ್ ಹ್ಯಾಕ್ ಆಗುವ ಸಾಧ್ಯತೆ ಇದೆ.

