ಬಂಟ್ವಾಳ: ಅಬ್ದುಲ್ ರಹಿಮಾನ್ ಮತ್ತು ಅಶ್ರಪ್ ವಯನಾಡು ಕೊಲೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನದ ವಿಳಂಬ ಮತ್ತು ಪರಿಹಾರ ಘೋಷಿಸಿದ ಸರಕಾರದ ನಡೆಯನ್ನು ಖಂಡಿಸಿ, ನ್ಯಾಯ ಮರೀಚಿಕೆ ಹುಸಿಯಾದ ಭರವಸೆ ಎಂಬ ಘೋಷ ವಾಕ್ಯದಲ್ಲಿ ಎಸ್.ಡಿ.ಪಿ.ಐ. ಪಕ್ಷದ ವತಿಯಿಂದ ಬಿಸಿರೋಡಿನ ಕೈಕಂಬ ಪೊಳಲಿ ದ್ವಾರದ ಬಳಿ ಮಂಗಳವಾರ ಸಂಜೆ ಬೃಹತ್ ಪ್ರತಿಭಟನೆ ನಡೆಯಿತು.

ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಜ್ ಶರೀಫ್ ಕಟ್ಟೆ ಮಾತನಾಡಿ, ಪರಿಹಾರ ವಿಳಂಬ ನೀತಿ ಹಾಗೂ ಪ್ರಮುಖ ಆರೋಪಿಗಳ ಬಂಧನವಾಗದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಬಜ್ಪೆಯಲ್ಲಿ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಬಳಿಕ ಗೂಂಡಾಗಳು ಅನೇಕ ಕಡೆಗಳಲ್ಲಿ ಚೂರಿ ಇರಿತ ಮಾಡಿದರು, ಆದರೆ ಯಾರೂ ಸಿಗದೆ ಇದಾಗ ಅಮಾಯಕ ಅಬುಲ್ ರಹಿಮಾನ್ ನ ಕೊಲೆ ಮಾಡಿದರು.

ಐಶಾರಾಮಿ ಬಂಗಲೆಯಲ್ಲಿ ಜೀವನ ಮಾಡುವ ಭರತ್ ಕುಮ್ಮೆಲು ಅವರಿಗೆ ಆದಾಯದ ಮೂಲಗಳು ಯಾವುದು? ಐಷಾರಾಮಿ ಕಾರು ನೀಡಿದವರು ಯಾರು? ಕೊಲೆ ಸುಳಿಗೆ ಸಹಿತ ಹಪ್ತ ವಸೂಲಿ ಮೂಲಕ ಜೀವನ ನಡೆಸುತ್ತಿರುವ ಭರತ್ ನ ಬಂಧಿಸಿ ತನಿಖೆ ನಡೆಸಿ ಎಂದು ಒತ್ತಾಯಿಸಿದರು.

ಅಮಾಯಕರ ಕೊಲೆಗಳಿಗೆ ದುಡ್ಡಿನಿಂದ ಆತ್ಮಕ್ಕೆ ಶಾಂತಿ ಸಿಗುವುದು ಇಲ್ಲ, ಕೊಲೆಗೆ ಸಹಕಾರ ನೀಡಿದ ಎಲ್ಲರ ಬಂಧನವಾಗಬೇಕು, ಅವರಿಗೆ ಶಿಕ್ಷೆಯಾಗಬೇಕು. ಅವಾಗ ಮಾತ್ರ ಕೊಲೆಗೆ ನ್ಯಾಯ ಸಿಗುತ್ತದೆ ಎಂದು ಅವರು ಹೇಳಿದರು.

ಎರಡು ಕೊಲೆಗಳು ನಡೆದ ಬಳಿಕ,ಕುಟುಂಬಗಳಿಗೆ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಿದೆ. ಸರ್ವ ಪಕ್ಷದ ನಿಯೋಗದ ಜೊತೆ ಹೋರಾಟ ಮಾಡುತ್ತಿದೆ. ನ್ಯಾಯ ಸಿಗುವವರೆಗೆ, ಮತ್ತು ಶಿಕ್ಷೆಯಾಗುವವರೆಗೆ ಎಸ್.ಡಿ.ಪಿ.ಐ. ಹೋರಾಟ ಮುಂದುವರಿಸಿಲಿದೆ ಎಂದು ಅವರು ತಿಳಿಸಿದರು.

ಎಸ್.ಡಿ.ಪಿ.ಐ. ಮುಸ್ಲಿಮರಿಗೆ ಅನ್ಯಾಯವಾದಗ ಮಾತ್ರ ಹೋರಾಟ ಮಾಡುವ ಪಕ್ಷ ಅಲ್ಲ, ಬದಲಿಗೆ ಪುತ್ತೂರಿನಲ್ಲಿ ನಡೆದ ಸೆಕ್ಸ್ ದೋಖಾ ದಂತಹ ಪ್ರಕರಣಗಳು ನಡೆದಾಗ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತೇವೆ ಎಂಬ ದೃಢವಾದ ಮಾತನ್ನು ಹೇಳುತ್ತೇವೆ ಪುತ್ತೂರು ಹೋರಾಟದ ಮೂಲಕ ತಿಳಿಸಿದ್ದೇವೆ.ಪುತ್ತೂರಿನಲ್ಲಿ ಮಹಿಳೆಗೆ ನ್ಯಾಯ ದೊರಕಿಸಿಕೊಡುವ ಕೆಲಸ ಎಸ್.ಡಿ.ಪಿ.ಐ.ಮಾಡಿದೆ ಎಂದು ಹೇಳಿದರು.

ರಾಜ್ಯ ಸಮಿತಿ ಸದಸ್ಯ ಅತವುಲ್ಲಾ ಜೋಕಟ್ಟೆ ಮಾತನಾಡಿ ಕೊಲೆ ಮಾಡಿದ ಕೊಲೆಗಡುಕರಿಗೆ ತಿಂಗಳೊಳಗೆ ಜಾಮೀನು ಸಿಗುವುದಾದರೆ, ಇಲ್ಲಿ ನ್ಯಾಯ ಎಲ್ಲಿದೆ ಎಂದು ಎಸ್.ಡಿ.ಪಿ.ಐ.ಪಕ್ಷ ಪ್ರಶ್ನೆ ಮಾಡುತ್ತಿದೆ. ಎಸ್.ಡಿ.ಪಿ.ಐ.ಪಕ್ಷ ಕೇವಲ ಪಕ್ಷವಲ್ಲ, ಬಿಸಿರೋಡಿನ ಪುರಸಭೆ ಯಲ್ಲಿ ಕಾಂಗ್ರೆಸ್ ಆಡಳಿತ ಮಾಡಬೇಕಾದರೆ ಎಸ್.ಡಿ.ಪಿ.ಐ.ಪಕ್ಷದ ಬೆಂಬಲದಿಂದ ಮಾತ್ರ ಸಾಧ್ಯವಾಯಿತು.

ಅಬ್ದುಲ್ ರಹಿಮಾನ್ ಹತ್ಯೆ ಸಂಘಟಿತ ಹತ್ಯೆಯಾಗಿದೆ, ಹಾಗಾಗಿ ಈತನ ಕೊಲೆ ಮಾಡಿದ ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯ ಕೊಡಿ, ಎಸ್.ಐ.ಟಿ.ಮೂಲಕ ನ್ಯಾಯ ನೀಡಲು ರಾಜ್ಯ ಸರಕಾರ ಯಾಕೆ ಹಿಂದೇಟು ಹಾಕುತ್ತಿದೆ? ಇದಕ್ಕೆ ಯಾರ ವಿರೋಧವಿದೆ ಎಂದು ಪ್ರಶ್ನೆ ಮಾಡಿದರು. ಅಮಾಯಕರ ಕೊಲೆಗಳಿಗೆ ನ್ಯಾಯಸಿಗುವವರೆಗೆ ಎಸ್.ಡಿ.ಪಿಐ.ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ವಿಶ್ವಾಸದ ಮಾತು ಆಡಿದರು.

ಪ್ರಮುಖರಾದ ಮಹಮ್ಮದ್ ಶರೀಪ್, ಅಕ್ಟರ್ ಆಲಿ, ಅಬ್ದುಲ್ ಜಲೀಲ್, ಸಿದ್ದೀಕ್, ಮೊನಿಶ್ ಆಲಿ, ಶಾಹುಲ್ ಹಮೀದ್ ಸಿದ್ದೀಕ್ ಪುತ್ತೂರು, ಜಮಾಲ್ ಜೋಕಟ್ಟೆ, ಅಕ್ಟರ್ ಬೆಳ್ತಂಗಡಿ, ಅಶ್ರಫ್ ಇಬ್ರಾಹಿಂ ಆಲ್ ಆದಿ ತಂಗಳ್, ಹನೀಫ್ ಪುಂಜಾಲಕಟ್ಟೆ, ಅಶ್ರಫ್ ತಲಪಾಡಿ, ಸಹಿತ ಜಿಲ್ಲಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.