ಮಂಗಳೂರು: ನಗರದಲ್ಲಿ ಎಸ್‌ಡಿಪಿಐ (SDPI) ಪಕ್ಷದ ಯುವ ಘಟಕವಾದ ‘ಯಂಗ್ ಡೆಮೋಕ್ರೆಟ್ಸ್’ ಸಂಘಟನೆಯ ಫ್ಲೆಕ್ಸ್ ಮತ್ತು ಬಾವುಟಗಳನ್ನು ಮಹಾನಗರ ಪಾಲಿಕೆ ಹಾಗೂ ಪೊಲೀಸರು ತೆರವುಗೊಳಿಸಿರುವುದನ್ನು ಖಂಡಿಸಿ, ಪಕ್ಷದ ನಾಯಕರು ರಸ್ತೆಯಲ್ಲಿ ಧರಣಿ ನಡೆಸಿದ್ದಾರೆ.
ರಾಜಕೀಯ ಒತ್ತಡದ ಕಾರಣದಿಂದಲೇ ತಮ್ಮ ಪ್ರಚಾರದ ಸಾಮಗ್ರಿಗಳನ್ನು ಉದ್ದೇಶಪೂರ್ವಕವಾಗಿ ತೆರವುಗೊಳಿಸಲಾಗಿದೆ ಎಂದು ನಾಯಕರು ಆರೋಪಿಸಿದ್ದಾರೆ. ಇತರೆ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಫ್ಲೆಕ್ಸ್ ಹಾಕಿದಾಗ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳು, ತಮ್ಮ ವಿಚಾರದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನುಮುಂದೆ ಇಂತಹ ಧೋರಣೆ ಮುಂದುವರಿದರೆ ತಾವೇ ಸ್ವತಃ ಇತರರ ಬ್ಯಾನರ್ ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಯುವಕರನ್ನು ಸಂಘಟಿಸುವ ತಮ್ಮ ಕಾರ್ಯಕ್ರಮದ ಯಶಸ್ಸನ್ನು ತಡೆಯಲು ಈ ರೀತಿ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.

