ಬೆಳ್ತಂಗಡಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ), ಇಂದು ಕೂಡ ಅಂದಿನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿಚಾರಣೆ ಮುಂದುವರಿಸಿದೆ.

ಮಂಗಳೂರಿನಲ್ಲಿರುವ ಎಸ್ಐಟಿ ಕಚೇರಿಗೆ ಸೌಜನ್ಯ ಪ್ರಕರಣದ ತನಿಖೆಯಲ್ಲಿ ಹಿಂದೆ ಭಾಗಿಯಾಗಿದ್ದ ಎಂಟು ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಚಾರಣೆಗೆ ಹಾಜರಾಗಿದ್ದಾರೆ. ಅಂದಿನ ತನಿಖೆಗೆ ಸಂಬಂಧಿಸಿದಂತೆ ಈ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಎಸ್ಐಟಿ ತನಿಖಾಧಿಕಾರಿಗಳಾದ ಲೋಕೇಶ್ ಜಗಲ್ಸಾರ್ ಮತ್ತು ಮನೋಜ್ ಕುಮಾರ್ ನಾಯ್ಕ್ ವಿಚಾರಣೆ ನಡೆಸುತ್ತಿದ್ದಾರೆ.

ವಿಚಾರಣೆಗೆ ಅಂದಿನ ಎಸ್ಐಟಿ ಕಲೈಮಾರ್, ಹೆಡ್‌ಕಾನ್‌ಸ್ಟೆಬಲ್ ಸುಂದರ್ ಶೆಟ್ಟಿ, ಮಹಿಳಾ ಹೆಡ್‌ಕಾನ್‌ಸ್ಟೆಬಲ್ ಸವಿತಾ ಶೆಟ್ಟಿ ಹಾಗೂ ನಿವೃತ್ತ ಎಸ್ಐಟಿ ಕುಶಾಲಪ್ಪ ಗೌಡ ಸೇರಿದಂತೆ ಎಂಟು ಮಂದಿ ಹಾಜರಾಗಿದ್ದಾರೆ.

ಸೌಜನ್ಯಾ ಪ್ರಕರಣದ ಆರಂಭಿಕ ತನಿಖೆಯ ವೇಳೆ ಕೈಗೊಂಡ ಕ್ರಮಗಳು, ತನಿಖೆಯ ಪ್ರಕ್ರಿಯೆ ಹಾಗೂ ಅಂದಿನ ಬೆಳವಣಿಗೆಗಳ ಕುರಿತು ಎಸ್ಐಟಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ವಿಚಾರಣೆ ಆರಂಭಗೊಂಡಿದೆ.