ಮಂಗಳೂರು: 14ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯಾ ಅತ್ಯಾಚಾರ ಹತ್ಯೆ ಪ್ರಕರಣದಲ್ಲಿ ಆರೋಪಿತ ಎನ್ನಲಾಗಿದ್ದ ಸಂತೋಷ್ ರಾವ್‌ನನ್ನು ವೈದ್ಯಕೀಯ ತಪಾಸಣೆ ನಡೆಸಿದ್ದ ಡಾ.ಮಹಾಬಲ ಶೆಟ್ಟಿ ಅವರಿಗೆ ಇಂದು ಎಸ್ಐಟಿ ಅಧಿಕಾರಿಗಳಿಂದ ಬುಲಾವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳ ಮುಂದೆ ವಿಚಾರಣೆ ಎದುರಿಸಿದ್ದಾರೆ.

ಎಸ್ಐಟಿ ಅಧಿಕಾರಿಗಳು ಅವರನ್ನು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಬಳಿಕ ಹೊರಗಡೆ ಬಂದ ಅವರನ್ನು ಮಾಧ್ಯಮದವರು ಮಾತನಾಡಲು ಯತ್ನಿಸಿದ್ದಾರೆ. ಆದರೆ ಎಸ್ಐಟಿ ವಿಚಾರಣೆ ಬಗ್ಗೆ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಈ ಬಗ್ಗೆ ತಾನೇನು ಮಾತನಾಡುವುದಿಲ್ಲ‌. ತನ್ನನ್ನು ಯಾಕೆ ವಿಚಾರಣೆಗೆ ಕರೆದಿದ್ದಾಗಿ, ಏನೇ ಪ್ರಶ್ನೆಗಳಿದ್ದರೂ ನೀವು ಎಸ್ಐಟಿ ಅಧಿಕಾರಿಗಳನ್ನೇ ಕೇಳಿ ಎಂದರು. ಸಂತೋಷ್ ರಾವ್ ಬಗ್ಗೆ ವಿಚಾರಿಸಿದಾಗ ‘ಅದು ಕೋರ್ಟ್‌ನಲ್ಲಿ ಮುಗಿದ ವಿಚಾರ. ಮತ್ತೆ ನೀವು ಸಂತೋಷ್ ರಾವ್‌ನನ್ನು ಯಾಕೆ ಎಳೆಯುತ್ತಿದ್ದೀರಿ ಎಂದು ಮಾಧ್ಯಮದವರ ಯಾವ ಪ್ರಶ್ನೆಗಳಿಗೂ ಉತ್ತರಿಸದೆ ಅವರು ಹೊರಟು ಹೋದರು.